ಬೆಂಗಳೂರು: ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಅತ್ಯಂತ ಖೇದಕರ ಸಂಗತಿ ಎಂದರೆ ಐಸಿಯು ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಎನ್ನುವುದು. ಈ ಬಗ್ಗೆ ಬೆಳಗ್ಗಿನಿಂದ ಸುಮಾರು 30 ಕರೆಗಳು ಬಂದಿವೆ. ಯಾವುದೇ ಕೋವಿಡ್ ಆಸ್ಪತ್ರೆಯನ್ನು ಕೇಳಿ 3 ಪಟ್ಟು ಜಾಸ್ತಿ ಕೊಟ್ಟು ಆಕ್ಸಿಜನ್ ಸಿಲಿಂಡರ್ ತಂದಿದ್ದೇವೆ ಎನ್ನುತ್ತಾರೆ ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಅಂಜನಪ್ಪ ಭೀಕರ ಪರಿಸ್ಥಿತಿಯ ಬಗ್ಗೆ ವಾಸ್ತವಿಕತೆ ಬಿಚ್ಚಿಟ್ಟರು.
ಆಕ್ಸಿಜನ್ ಸಿಲಿಂಡರ್ ಇಲ್ಲದಿದ್ದರೆ ಆಕ್ಸಿಜನ್ ತಯಾರು ಮಾಡುವ ಮಿಷನ್ ಸಿಗುತ್ತಾ ಎಂದು ಹಲವು ಜನ ನನ್ನನ್ನು ಸಂಪರ್ಕಿಸಿದ್ದಾರೆ. ಈ ಪ್ರಶ್ನೆಗೆ ಮಾಹಿತಿ ಕೊಡುತ್ತೇನೆ. ಈ ಉಪಕರಣಕ್ಕೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಎನ್ನುತ್ತೇವೆ. ನಿಮಗೆ ಆರ್ಥಿಕ ಶಕ್ತಿ ಇದ್ದರೆ ಅದರ ಬೆಲೆ 70 ಸಾವಿರದಿಂದ 1.5 ಲಕ್ಷದವರೆಗೂ ಇದ್ದು, ಬುಕ್ ಮಾಡಿದರೆ 15 ದಿನದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಹೇಳಿದರು.
ಮನುಷ್ಯನಿಗೆ ಆಮ್ಲಜನಕ ಸಿಲಿಂಡರ್ನಿಂದ ಮಾತ್ರವಲ್ಲ, ವಾತಾವರಣದಲ್ಲಿ ಕೂಡ ಶೇ. 21ರಷ್ಟು ಇರುತ್ತದೆ. ಈ ಉಪಕರಣ ಮನೆಯಲ್ಲಿ ಅಥವಾ ರೂಮಿನಲ್ಲಿ ಇರುವಂತಹ ನೈಸರ್ಗಿಕ ಆಕ್ಸಿಜನ್ ಸಂಸ್ಕರಿಸಿ ಸುರಕ್ಷಿತವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಎಲ್ಲರೂ ಇದನ್ನು ಬಳಸಬಹುದು. ಉಪಕರಣದ ಜೊತೆ ಸೂಚನೆಗಳು ಇದ್ದು, ನಾನು ಕೂಡ ನನ್ನ ನರ್ಸಿಂಗ್ ಹೋಮ್ನಲ್ಲಿ ಬಳಸಿದ್ದೇನೆ ಎಂದು ಮಾಹಿತಿ ನೀಡಿದರು.
ನಿಮಗೆ ಕೊಂಡುಕೊಳ್ಳುವ ಶಕ್ತಿ ಇದ್ದರೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಕೊಂಡುಕೊಳ್ಳಿ. ಉಪಕರಣದಿಂದ ಒಳ್ಳೇದಾಗುತ್ತದೆ. ಇದರಲ್ಲಿ ಒಂದಷ್ಟು ಸೂಚನೆಗಳು ಇದ್ದು, ಒಂದು ಬಾರಿ ಇದನ್ನು ಕೊಂಡುಕೊಂಡರೆ ಸಾಕಷ್ಟು ವರ್ಷ ಬಳಸಬಹುದು. ಈ ಉಪಕರಣಕ್ಕೆ ಯಾವ ಸಿಲಿಂಡರ್ಗಳ ಅಗತ್ಯವಿಲ್ಲ ಎಂದು ತಿಳಿಸಿದರು.
ಓದಿ: 14 ದಿನ ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇರಿ : ಜನತೆಗೆ ಗೃಹ ಸಚಿವ ಬೊಮ್ಮಾಯಿ ಮನವಿ