ಬೆಂಗಳೂರು: ನಗರದ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ನಲ್ಲಿ ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು, ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಅವಶೇಷದಡಿ ಸಿಲುಕಿದ್ದ 6 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ನಾಲ್ವರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬಿಡಬ್ಲೂಎಸ್ ಎಸ್ ಬಿ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸೆಂಟ್ರಿಂಗ್ಗೆ ಅಳವಡಿಸಿದ್ದ ಕಂಬ ಸಡಿಲಗೊಂಡು ಅವಘಡ ನಡೆದಿದೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ವಾಹನ, ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಗಾಯಗೊಂಡ 8 ಕಾರ್ಮಿಕರನ್ನು ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಹೊಟ್ಟೆಯಲ್ಲಿ ಕಬ್ಬಿಣದ ರಾಡ್ ಚುಚ್ಚಿಕೊಂಡಿದೆ.
ಉಳಿದ 6 ಜನರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚೈತನ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 22 ಜನ ಕಾರ್ಮಿಕರು ವಾಟರ್ ಟ್ಯಾಂಕ್ನ ಛಾವಣಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಎಲ್ಲರೂ ಉತ್ತರ ಭಾರತದವರಾಗಿದ್ದು, ಪಶ್ಚಿಮಬಂಗಾಳ, ಬಿಹಾರ್ ಸೇರಿದಂತೆ ಹಲವು ರಾಜ್ಯಗಳಿಂದ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಬಿಡ್ಬ್ಯೂಎಸ್ಎಸ್ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ಇಂದು ಬೆಳಗ್ಗೆ 11ಕ್ಕೆ ಘಟನೆ ನಡೆದಿದೆ. ವಾರದ ಹಿಂದೆ ಶೀಟ್ ಸೆಂಟ್ರಿಂಗ್ ಅಳವಡಿಸಲಾಗಿತ್ತು. ಇಂದು ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯಬೇಕಿದ್ದ ಹಿನ್ನೆಲೆ 21 ಜನ ಕೆಲಸದಲ್ಲಿ ತೊಡಗಿದ್ರು. ಕಾಂಕ್ರೀಟ್ ಹಾಕುವ ಕೆಲಸ ಸಂಪೂರ್ಣವಾಗಿ ಮುಗಿದಿದ್ದು, ಇಂದು ಸಮಮಟ್ಟ ಮಾಡುವ ಕಾರ್ಯದಲ್ಲಿದ್ರು. ಈ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಒಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೆಲವರಿಗೆ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.