ಬೆಂಗಳೂರು: ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಓಲೈಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಫಲರಾಗಿದ್ದಾರೆ. ಸಾಲು ಸಾಲು ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿರುವ ಕತ್ತಿ ಸಮಾಧಾನದ ಮಾತುಗಳನ್ನು ಕೇಳದೇ ನಿರ್ಗಮಿಸಿದ್ದಾರೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದ್ದು ಮುನಿಸಿಕೊಂಡ ಉಮೇಶ್ ಕತ್ತಿಯನ್ನು ಸಮಾಧಾನಪಡಿಸಲು ಬಾಲಚಂದ್ರ ಜಾರಕಿಹೊಳಿ ಅವರನ್ನು ಸಿಎಂ ಕಳುಹಿಸಿಕೊಟ್ಟರು. ಕತ್ತಿ ಜೊತೆ ಮಾತುಕತೆ ನಡೆಸಿದ ಜಾರಕಿಹೊಳಿ ಮುನಿಸಿಕೊಂಡಿದ್ದ ನಾಯಕನನ್ನು ಸಿಎಂ ನಿವಾಸಕ್ಕೆ ಕರೆ ತರುವಲ್ಲಿ ಸಫಲರಾದರೂ ಸಹ ಬಿಎಸ್ವೈ ಸಮ್ಮುಖದಲ್ಲಿ ನಡೆದಿದ್ದೇ ಬೇರೆ ಎನ್ನಲಾಗ್ತಿದೆ.
ನಾನು ಗೆದ್ದಿರುವ ಶಾಸಕ. ಇಡೀ ಜಿಲ್ಲೆಯಲ್ಲಿ ಹಿಡಿತ ಇದೆ. ನನ್ನ ಸಹೋದರನಿಗೂ ಸಂಸತ್ ಟಿಕೆಟ್ ಕೊಡಲಿಲ್ಲ. ನನಗೂ ಸಚಿವ ಸ್ಥಾನ ಕೊಡಲಿಲ್ಲ. ನಿಮ್ಮ ಹಾಗೂ ಹೈಕಮಾಂಡ್ ನಾಯಕರ ಉದ್ದೇಶ ಏನು ಎಂದು ಅರ್ಥ ಆಗುತ್ತಿಲ್ಲ. ಇಷ್ಟು ವರ್ಷ ಮಾನ ಮರ್ಯಾದೆ ಕಾಪಾಡಿಕೊಂಡು ಬಂದ ನನಗೆ ಈಗ ಏನಾಗಬೇಕು? ಕ್ಷೇತ್ರದಲ್ಲಿ ಮುಖ ತೋರಿಸುವುದು ಬೇಡವಾ ಎಂದು ಸಿಎಂ ಯಡಿಯೂರಪ್ಪ ಎದುರು ಕತ್ತಿ ಗುಡುಗಿದ್ದಾರೆ ಎನ್ನಲಾಗ್ತಿದೆ.
ಲಕ್ಷಣ್ ಸವದಿಗೆ ಯಾವ ಆಧಾರದಲ್ಲಿ ಸಚಿವ ಸ್ಥಾನ ನೀಡಿದಿರಿ? ನಾನು ಪಕ್ಷಕ್ಕೆ ಅಥವಾ ನಿಮಗೆ ಯಾವ ದ್ರೋಹ ಮಾಡಿದ್ದೀನಿ ಹೇಳಿ? ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ಕೊಟ್ಟಿದ್ದೀರಿ. ಸವದಿಗೂ ಕೊಟ್ಟಿದ್ದೀರಿ. ಬೆಳಗಾವಿಯಲ್ಲಿ ನನ್ನ ಮರ್ಯಾದೆ, ತಾಕತ್ತು ಕುಗ್ಗಿಸೋ ಪ್ರಯತ್ನ ಮಾಡುತ್ತಿದ್ದೀರಿ ಎಂದು ಉಮೇಶ್ ಕತ್ತಿ ರೇಗಾಡಿದ್ದಾರೆ ಎನ್ನಲಾಗ್ತಿದೆ.
ಇದಕ್ಕೆಲ್ಲಾ ಸಮಾಧಾನದಿಂದಲೇ ಉತ್ತರಿಸಿರುವ ಸಿಎಂ, ಸ್ವಲ್ಪ ಕಾದು ನೋಡೋಣ, ಸಮಾಧಾನವಾಗಿರಿ. ಎಲ್ಲವನ್ನೂ ಸರಿ ಮಾಡೋಣ, ಇನ್ನೂ ಸಚಿವ ಸ್ಥಾನಗಳಿವೆ. ಮುಂದಿನ ಬಾರಿ ಎಲ್ಲವನ್ನೂ ಸರಿಪಡಿಸೋಣ. ನೀವು ಹಿರಿಯರಿದ್ದು, ಸಮಾಧಾನವಾಗಿರಿ ಎಂದು ಹೇಳಿದ್ದಾರೆ. ಸಿಎಂ ಬಿಎಸ್ ವೈ ಮಾತಿಗೆ ಸಮಾಧಾನವಾಗದೆ ತಮ್ಮ ಅಸಮಾಧಾನ ಹೊರಹಾಕಿ ಧವಳಗಿರಿ ನಿವಾಸದಿಂದ ಹೊರ ಬಂದ ಉಮೇಶ್ ಕತ್ತಿ ಗರಂ ಆಗಿಯೇ ನಿರ್ಗಮಿಸಿದರು ಎಂದು ತಿಳಿದುಬಂದಿದೆ.
ಕತ್ತಿ ನಿರ್ಗಮನದ ನಂತರ ಮತ್ತೆ ಬಾಲಚಂದ್ರ ಜಾರಕಿಹೊಳಿಯನ್ನು ಕರೆಸಿಕೊಂಡ ಸಿಎಂ, ಮುಂದೆ ಎಲ್ಲವನ್ನೂ ಸರಿಪಡಿಸುತ್ತೇನೆ. ಅವರಿಗೆ ತಿಳಿ ಹೇಳಿ ಅಂತಾ ಅಸಮಧಾನ ಸರಿಪಡಿಸುವಂತೆ ಸಲಹೆ ನೀಡಿದ್ದಾರೆ.