ಬೆಂಗಳೂರು: ತಮಿಳುನಾಡು ಹಾಗೂ ಕರ್ನಾಟಕ ಗಡಿಭಾಗದಲ್ಲಿ ಸುಮಾರು ಆರು ಜನರನ್ನು ಬಲಿ ತೆಗೆದುಕೊಂಡಿದ್ದ ಎರಡು ಕಾಡಾನೆಗಳು ತಮಿಳುನಾಡಿನ ಗಡಿಭಾಗದ ಬಾಗಲೂರು ರಸ್ತೆಯ, ಬೆಳ್ತೂರು ತೋಪಿನಲ್ಲಿ ಕಾಣಿಸಿಕೊಂಡಿವೆ.
ಇಂದು ತಮಿಳುನಾಡಿನ ಗಡಿಭಾಗದ ಬಾಗಲೂರು ರಸ್ತೆಯ ಬೆಳ್ತೂರು ತೋಪಿನಲ್ಲಿ ಕಾಣಿಸಿಕೊಂಡಿವೆ. ಕಳೆದ ಎರಡು ದಿನಗಳ ಹಿಂದೆ ಕರ್ನಾಟಕದ ಗಡಿಭಾಗವಾದ ತಿರುವರಂಗ ಎಂಬ ಗ್ರಾಮದ ನಿವಾಸಿ ಅಣ್ಣಯ್ಯಪ್ಪ ಎಂಬಾತನನ್ನು ಕಾಡಾನೆಗಳು ಬಲಿ ಪಡೆದುಕೊಂಡಿದ್ದವು. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, ಆನೇಕಲ್, ಹೊಸಕೋಟೆ ಹಾಗೂ ತಮಿಳುನಾಡಿನ ಹೊಸೂರು ಭಾಗದ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಓಡಿಸಿದ್ದಾರೆ.
ಇನ್ನು ಇವುಗಳನ್ನು ಸೆರೆಹಿಡಿಯಲು ಸಾಕಾನೆಗಳನ್ನು ತರಿಸಲಾಗಿದ್ದು, ಅವುಗಳನ್ನು ಸೆರೆ ಹಿಡಿದು ಕಾಡಿನ ಪ್ರದೇಶಕ್ಕೆ ಓಡಿಸಲು ಅರಣ್ಯಾಧಿಕಾರಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.