ಬೆಂಗಳೂರು: ಹೊರವಲಯದ ಆವಲಹಳ್ಳಿ ಕೆರೆಯ ಬಳಿ ರಾತ್ರಿ 11.30 ರ ಸಮಯದಲ್ಲಿ ಲಾರಿ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಮೂಲತಃ ನೇಪಾಳದಿಂದ ಬಂದು ಕೆಆರ್ ಪುರದ ರಾಮಮೂರ್ತಿ ನಗರದಲ್ಲಿ ಇಬ್ಬರು ಸೆಕ್ಯೂರಿಟಿ ಹಾಗೂ ಒಬ್ಬ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನೇಪಾಳ ಮೂಲದ ರಘು, ಕಕ್ರಿ, ಬಹುದ್ಧೂರ್ ಮೂವರು ರಾತ್ರಿ ತನ್ನ ಸ್ನೇಹಿತನನ್ನು ರಾಮಮೂರ್ತಿ ನಗರದಿಂದ ಹೊಸಕೋಟೆ ಗೆ ಡ್ರಾಪ್ ಮಾಡಲು ಬಂದು ವಾಪಸ್ ಹೋಗುತಿದ್ದಾಗ ಆವಲಹಳ್ಳಿ ಕೆರೆಯ ಮಧ್ಯದಲ್ಲಿ ತುಂಬಾ ಕತ್ತಲು ಇರುವುದರಿಂದ ಲಾರಿ ಚಾಲಕ ತನ್ನ ನಿರ್ಲಕ್ಷ್ಯದಿಂದ ಲಾರಿಯನ್ನು ಹೈವೆ ರಸ್ತೆಯಲ್ಲಿ ಇಂಡಿಕೇಟರ್ ಹಾಕದೆ ಲಾರಿಯನ್ನು ಪಾರ್ಕ್ ಮಾಡಿ ನಿಲ್ಲಿಸಿದ್ದಾನೆ.
ಅದೇ ಸಮಯದಲ್ಲಿ ಜೋರು ಮಳೆ ಸಹ ಬರುತ್ತಿತ್ತು ರಸ್ತೆಯಲ್ಲಿ ತುಂಬಾ ಕತ್ತಲು ಇದ್ದ ಪರಿಣಾಮ ಆಟೋದಲ್ಲಿ ಬರುತ್ತಿದ್ದ ನೇಪಾಳದವರು, ನೋಡದೇ ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ನಡೆದಿದೆ. ಚಾಲಕ ಲಾರಿ ಬಿಟ್ಟು ಪಾರಾರಿಯಾಗಿದ್ದಾನೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಲಾರಿ ಮಾಲಿಕನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೂವರು ಸಾವನ್ನಪ್ಪಿದ ಘಟನೆ ತಿಳಿದು ನೂರಾರು ಜನ ಸಂಬಂಧಿಕರು ಕೆಲಸಕ್ಕೆ ರಜೆ ಹಾಕಿ ಆಸ್ಪತ್ರೆಯ ಬಳಿ ಜಮಾಯಿಸಿದರು. ಕುಟುಂಬದ ಆಧಾರವಾಗಿದ್ದವರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಲಾರಿ ಚಾಲಕನ ತಪ್ಪಿನಿಂದ ನೇಪಾಳದಿಂದ ಬಂದು ಜೀವನ ಸಾಗಿಸುತ್ತಿದ್ದ ಅಮಾಯಕರ ಜೀವ ಬಲಿಯಾಗಿದೆ.