ಬೆಂಗಳೂರು: ಯಾವ ಪಕ್ಷದಲ್ಲೂ ತತ್ವ-ಸಿದ್ಧಾಂತ ಇಲ್ಲ, ನಾವೂ ಅದಕ್ಕೆ ಹೊರತಾಗಿಲ್ಲ ಎನ್ನುವ ಮೂಲಕ ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಬೇಸರ ಹೊರಹಾಕಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಪರಿಷತ್ನಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೆಲವೊಂದು ಸರಿ-ತಪ್ಪುಗಳು ಆಗುತ್ತವೆ. ಅದಕ್ಕೆ ಏನು ಮಾಡೋದಕ್ಕೆ ಆಗಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇವತ್ತಿನ ರಾಜಕಾರಣ ಕಲುಷಿತವಾಗಿದೆ. ಇವತ್ತಿನ ರಾಜಕಾರಣದಲ್ಲಿ ಸಿದ್ಧಾಂತವೇ ಇಲ್ಲ. ನಾವು ನಿನ್ನೆ ಬಂದ್ಗೆ ಬೆಂಬಲ ನೀಡಿದ್ದೇವೆ. ಪರಿಷತ್ನಲ್ಲಿ ನಮ್ಮ ಸದಸ್ಯರಿಗೆ ಗೊಂದಲವಾಗಿದೆ. ಕೆಲವರು ಭೂ ಮಸೂದೆಯ ಪರವಾಗಿದ್ದರು. ಮರಿತಿಬ್ಬೇಗೌಡ ಒಬ್ಬರೇ ವಿರೋಧ ವ್ಯಕ್ತಪಡಿಸಿದರು. ಪರಿಷತ್ನಲ್ಲಿ ಯಾಕೆ ಹಾಗಾಯ್ತು ಎಂದು ನಾಳೆ ಹೇಳುತ್ತೇವೆ ಎಂದು ಹೊರಟ್ಟಿ ಹೇಳಿದ್ರು.
ಇದನ್ನೂ ಓದಿ : 'ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ,ಜೆಡಿಎಸ್ ಈ ಮಣ್ಣಿಗೆ ಎಂದೂ ದ್ರೋಹ ಮಾಡಲ್ಲ'
ಇದು ಸರಿಯೋ, ತಪ್ಪೋ ಪರಿಷತ್ನಲ್ಲಿ ಮಸೂದೆ ಪರ ನಿಂತಿದ್ದು ನಿಜ. ಕಳೆದ ಬಾರಿ ಬಿಲ್ ಮಂಡನೆ ವೇಳೆ ನಾವು ಬಿಜೆಪಿಗೆ ಬೆಂಬಲ ಕೊಟ್ಟಿರಲಿಲ್ಲ. ಬಳಿಕ ನಮ್ಮ ನಾಯಕರ ಜೊತೆ ಬಿಜೆಪಿಯವರು ಮಾತನಾಡಿದ್ದಾರೆ. ನಾವು ವಿರೋಧ ಮಾಡಿದ ಕೆಲವೊಂದು ಅಂಶಗಳನ್ನ ಕಾಯ್ದೆಯಲ್ಲಿ ತೆಗದು ಹಾಕಿದ್ದಾರೆ. ಈಗ ಯಾವ ಪಕ್ಷದಲ್ಲಿ ತತ್ವ ಸಿದ್ಧಾಂತ ಇದೆ? ನೀವೇ ಹೇಳಿ. ಈಗಿನ ರಾಜಕಾರಣವನ್ನು ಹೊಂದಾಣಿಕೆ ಅಂತೀರೋ, ಇನ್ನೇನು ಅಂತಿರೋ ಗೊತ್ತಿಲ್ಲ. ಆದ್ರೆ ರಾಜಕೀಯದಲ್ಲಿ ಸುಧಾರಣೆಯನ್ನು ತರಬೇಕು ಎಂದು ತಿಳಿಸಿದರು.