ಬೆಂಗಳೂರು: ಸಂಸಾರ ನಿಭಾಯಿಸಲು ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲದ ರಾಜೇಂದ್ರ ನಗರದ ಶೇಖ್ ಬಾಬು ಬಂಧಿತನಾಗಿದ್ದು ಈತನಿಂದ 8.37 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಶೇಖ್ ಬಾಬು ದುಶ್ಚಟಕ್ಕೆ ಹಾಗೂ ಸಂಸಾರ ನಿಭಾಯಿಸಲು ಮನೆಗಳ್ಳತನ ಮಾಡುತ್ತಿದ್ದ. ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಈತ, ರಾತ್ರಿ ವೇಳೆ ಬಾಗಿಲು ಮುರಿದು ನಗ-ನಾಣ್ಯ ದೋಚುತ್ತಿದ್ದ.
ಸಂಜಯ ನಗರ ಠಾಣಾ ವ್ಯಾಪ್ತಿಯಲ್ಲಿ ಒಡಿಶಾ ಮೂಲದ ದಂಪತಿ ಮನೆಯಲ್ಲಿ ಇಲ್ಲದಿದ್ದಾಗ ಕನ್ನ ಹಾಕಿದ ಈತ, ಸುಮಾರು 15 ಲಕ್ಷ ಮೌಲ್ಯದ 499 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ. ಗುರುತು ಪತ್ತೆಯಾಗದಿರಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಹಾಗೂ ಡಿವಿಆರ್ ಕಳ್ಳತನ ಮಾಡಿ ಸಾಕ್ಷಿ ನಾಶ ಮಾಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.