ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಜೂನ್ 14ರಿಂದ 25ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೆ ವಿದ್ಯಾರ್ಥಿಗಳಿಂದ ಆಕ್ಷೇಪಣೆ ಸಲ್ಲಿಸಲು ಇಂದು ಕಡೆಯ ದಿನವಾಗಿದೆ. 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿತ ಸಮಯದೊಳಗೆ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶೇ. 30ರಷ್ಟು ಪಠ್ಯವಸ್ತುವನ್ನ ಕಡಿತ ಮಾಡಲಾಗಿದೆ. ಇದು ಕೇವಲ ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದ್ದು, 2021-22ರ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿರಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಜನವರಿಯಿಂದ ಎಸ್ಎಸ್ಎಲ್ಸಿ ತರಗತಿಗಳು ಆರಂಭವಾಗಿವೆ. ಶೇ. 70ರಷ್ಟು ಪಠ್ಯಕ್ರಮಗಳನ್ನ ಮುಗಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಮುಖ್ಯವಾಗಿ ಸರ್ಕಾರಿ ಶಾಲಾ ಮಕ್ಕಳು ಆನ್ಲೈನ್ ಕ್ಲಾಸ್ನಿಂದಲೂ ವಂಚಿತರಾಗಿರುವುದರಿಂದ ಪೂರ್ಣಾವಧಿ ತರಗತಿಯಲ್ಲೇ ಅಭ್ಯಾಸ ಮಾಡಬೇಕಾದ ಪರಿಸ್ಥಿತಿಯಿದೆ. ಅಂತಹ ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು ಎಂದು ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಖಾಸಗಿ ಶಾಲೆಗಳು ಕಳೆದ ವರ್ಷ ಮೇ ತಿಂಗಳಿನಿಂದಲೇ ಆನ್ಲೈನ್ ಕ್ಲಾಸ್ಗಳನ್ನ ಶುರು ಮಾಡಿದ್ದವು. ಹೀಗಾಗಿ ಸಿಲಬಸ್ ಇನ್ ಕಂಪ್ಲೀಟ್ ಅನ್ನೋ ಪ್ರಾಬ್ಲಂ ಬರೋದಿಲ್ಲ. ನಿಗದಿತ ಸಮಯದೊಳಗೆ ಸಿಲಬಸ್ ಪೂರ್ಣಗೊಂಡಿಲ್ಲ. ಆದರೆ ಆನ್ಲೈನ್ ಕ್ಲಾಸ್ ವಂಚಿತರಾಗಿರುವವರಿಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಿಲಬಸ್ ಪೂರ್ಣಗೊಳಿಸಲು ಕಷ್ಟವಾಗಬಹುದು ಎಂದು ಮಾಹಿತಿ ನೀಡಿದರು.
ಇತ್ತ ಶಿಕ್ಷಣ ಇಲಾಖೆ ವತಿಯಿಂದಲೂ ಆನ್ಲೈನ್ ಶಿಕ್ಷಣ ವಂಚಿತರಾದವರಿಗೆ ಪರ್ಯಾಯವಾಗಿ ಸಂವೇದಾ ಪಾಠಗಳನ್ನು ಆರಂಭಿಸಲಾಗಿತ್ತು. ಭೌತಿಕ ತರಗತಿಗಳು ಆರಂಭವಾಗದೇ ಇರುವ ಸಂದರ್ಭದಲ್ಲಿ ಹಾಗೂ ಆರಂಭವಾದ ನಂತರವೂ ದೂರದರ್ಶನ ಚಂದನಲ್ಲಿ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂವೇದಾ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿತ್ತು.
ಸದ್ಯ, ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅಷ್ಟರಲ್ಲಿ ಮಕ್ಕಳಿಗೆ ಪಠ್ಯಕ್ರಮ ಮುಕ್ತಾಯದ ಜೊತೆಗೆ ಪರೀಕ್ಷಾ ತಯಾರಿ ನಡೆಸಲು ಸಿದ್ಧತೆ ನಡೆಯುತ್ತಿದೆ.