ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿ ಏನನ್ನು ಹೇಳದೇ ಹಾಗೇ ಮರಳಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ನೀಡುತ್ತಾರೆ ಎಂಬುದನ್ನು ಶೀಘ್ರವೇ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಗಂಭೀರವಾದ ಅತಿವೃಷ್ಟಿ ಪರಿಸ್ಥಿತಿ ಇದೆ. ಎಲ್ಲಾ ಸಂಘ ಸಂಸ್ಥೆಗಳು ನೆರವು ನೀಡುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಕಡೆಯಿಂದ ಕೂಡ ಸಿಎಂ ಪರಿಹಾರ ನಿಧಿಗೆ ನೆರವು ನೀಡಿ ಸಹಾಯ ಮಾಡುತ್ತಿದ್ದೇವೆ. ರಾಜ್ಯಕ್ಕೆ ಕೇಂದ್ರದಿಂದ ತಾತ್ಕಾಲಿಕವಾಗಿ ₹ 5 ಸಾವಿರ ಕೋಟಿ ನೆರೆವು ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆ ಇಲ್ಲ: ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದಂತೆ ಇದೆ. ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಯಾವುದೇ ಪರಿಹಾರ ಕೆಲಸ ಮಾಡುತ್ತಿಲ್ಲ. ಇದನ್ನು ಖಂಡಿಸಿ ಬೀದಿಗಿಳಿಯಬೇಕು ಅಂದುಕೊಂಡಿದ್ದೇವು. ಆದರೆ, ರಾಜಕೀಯ ಮಾಡುವುದಕ್ಕಿಂತ ಪ್ರಥಮವಾಗಿ ಸಂತ್ರಸ್ತರ ನೆರವು ನೀಡಬೇಕಿದೆ ಎಂದು ಹೇಳಿದರು.
ಶಿವಮೊಗ್ಗ, ಚಿಕ್ಕಮಗಳೂರು ಕಡೆ ಪ್ರವಾಹ ಪರಿಸ್ಥಿತಿ ಇದೆ. ಹೀಗಾಗಿ ನಾಳೆ ನಮ್ಮ ಮುಖಂಡರ ಸಭೆ ಕರೆದಿದ್ದೇವೆ. ದೇಶಪಾಂಡೆ, ಉಗ್ರಪ್ಪ, ಹೆಚ್.ಸಿ.ಮಹದೇವಪ್ಪ, ರಾಮನಾಥ್ ರೈ, ಬಿ.ಎಲ್.ಶಂಕರ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. 5 ತಂಡಗಳನ್ನ ಮಾಡಿ ಪರಿಶೀಲನೆಗೆ ಕಳಿಸುತ್ತೇವೆ. ಅತಿವೃಷ್ಠಿಯ ಪ್ರದೇಶಗಳಿಗೆ ತಂಡ ಭೇಟಿ ನೀಡಲಿದೆ ಎಂದರು.