ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನ ವಿರೋಧಿ ಬಜೆಟ್ ಆಗಿದ್ದು, ಜನರಿಗೆ ಭಾರ ಹೊರಿಸಿರುವ, ಅಭಿವೃದ್ಧಿ ವಿರೋಧಿ, ಅಭಿವೃದ್ಧಿಗೆ ಮಾರಕವಾಗುವ, ಯಾವುದೆ ಹೊಸ ಭರವಸೆ ಮೂಡಿಸದ, ಜನತೆಗೆ ನಿರಾಶಾದಾಯಕ ಬಜೆಟ್ ಆಗಿದೆ. ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ರಿವರ್ಸ್ ಗೇರ್ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬಜೆಟ್ ಮಂಡನೆ ನಂತರ ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಗೆ ನಾಲ್ಕು ತಿಂಗಳ ಲೇಖಾನುದಾನ ಪಡೆದಿದ್ದೆವು. ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಬಜೆಟ್ ಆಗಿದೆ. ಹಲವಾರು ಅಂಕಿ - ಅಂಶಗಳನ್ನು ಆಧರಿಸಿ ವಾಸ್ತವಾಂಶಕ್ಕೆ ಎಲ್ಲ ಸರ್ಕಾರಗಳು ಬಜೆಟ್ ಮಾಡಲಿವೆ. ಆದರೆ, ಇವರು ಎಲ್ಲವನ್ನೂ 2013ಕ್ಕೆ ಹೋಲಿಕೆ ಮಾಡಿದ್ದಾರೆ. ಇದು ರಿವರ್ಸ್ ಗೇರ್ ಇರುವ ಸರ್ಕಾರ, ನಾವು ಹಿಂದೆ ಹೋಗಬೇಕಾ ಮುಂದೆ ಹೋಗಬೇಕಾ? ಎಂದು ಪ್ರಶ್ನಿಸಿದರು.
ಇದು ಸುಳ್ಳು ಹೇಳುವ ಸರ್ಕಾರ : ಗ್ಯಾರಂಟಿಗಳ ಬಗ್ಗೆ ಚುನಾವಣೆಗೂ ಮೊದಲು ಘೋಷಣೆ ಮಾಡಿರುವುದಕ್ಕೂ, ರಾಜ್ಯಪಾಲರ ಭಾಷಣ ಮತ್ತು ಬಜೆಟ್ ನಲ್ಲಿ ಹೇಳಿರುವುದನ್ನು ನೋಡಿದರೆ ಇದು ಸುಳ್ಳು ಹೇಳುವ ಸರ್ಕಾರ ಎಂದು ತಿಳಿಯಲಿದೆ. ದೇಶದಲ್ಲೇ ರಾಜ್ಯದಲ್ಲಿ ಕೋವಿಡ್ ಅತ್ಯುತ್ತಮ ನಿರ್ವಹಣೆಯಾಗಿದೆ. ಅಂದು ನಾವು ತೆರಿಗೆ ವಿನಾಯಿತಿ, ಪರಿಹಾರ ಎಲ್ಲ ಮಾಡಿದ್ದರೂ ಅಂದಿನ ಆರ್ಥಿಕ ನಿರ್ವಹಣೆ ಸರಿಯಿಲ್ಲ ಎನ್ನುತ್ತಿದ್ದಾರೆ. ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಆರ್ಥಿಕ ನಿರ್ವಹಣೆ, ಸ್ಥಿತಿ ಕುರಿತು ವರದಿ ಇದೆ ನೋಡಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕೇಂದ್ರದ ಯೋಜನೆಗಳಿಗೆ ಹಣ ಕಡಿಮೆ ಮಾಡಿದ್ದಾರೆ ಎಂದು ಇವರು ಆರೋಪ ಮಾಡಿದ್ದಾರೆ. ಕೆಲ ಯೋಜನೆಗೆ ಅನುದಾನ ಕೊಡಲಿದೆ. ಕೆಲ ಯೋಜನೆಗೆ ಫಲಾನುಭವಿ ಖಾತೆಗೆ ಹಣ ಬರಲಿದೆ. ಆದರೆ ತಪ್ಪು ಮಾಹಿತಿ ನೀಡಿದ್ದಾರೆ. ಇದಕ್ಕೆ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸುತ್ತೇವೆ ಎಂದರು.
ಬಜೆಟ್ನಲ್ಲಿ 50 ಪ್ಯಾರಾಗೂ ಹೆಚ್ಚು ಬರೀ ಟೀಕೆ ಮಾಡುವುದಕ್ಕೇ ಮೀಸಲಿಟ್ಟಿದ್ದಾರೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಬೇಕು ಎಂದಿದ್ದಾರೆ. ಆದರೆ, ಫ್ರೀ ಬಸ್ ಯೋಜನೆ ಮಾತ್ರ ಜಾರಿಯಾಗಿದೆ. ಉಳಿದವು ಇನ್ನು ಜಾರಿ ಆಗಿಲ್ಲ. ಅಲ್ಲದೇ ಅವರು ಹಾಕಿರುವ ಷರತ್ತು ನೋಡಿದರೆ 20-25 ಸಾವಿರ ಕೋಟಿ ಮಾತ್ರ ಸಾಕಾಗಲಿದೆ. ಹಾಗಾಗಿ ಅವರು ಹೆಚ್ಚಿನ ತೆರಿಗೆ ಹಾಕಬೇಕಾದ ಹೆಚ್ಚಿನ ಸಾಲ ಮಾಡಬೇಕಾದ ಅಗತ್ಯ ಇರಲಿಲ್ಲ ಎಂದರು.
ವಿತ್ತೀಯ ಕೊರತೆಯ ಬಜೆಟ್ ಮಂಡನೆ : ಬಜೆಟ್ನಲ್ಲಿ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಮೋಟಾರ್ ವೆಹಿಕಲ್ ತೆರಿಗೆ, ನೋಂದಣಿ ಮುದ್ರಾಂಕ ತೆರಿಗೆ ಹೆಚ್ಚಿಸಿದ್ದಾರೆ. ಈ ಬಜೆಟ್ ಸಾಮಾನ್ಯ ಜನರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. 75 ಸಾವಿರ ಕೋಟಿ ಇದ್ದ ಬಜೆಟ್ನ್ನು 83 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ. ಸುಮಾರು 3.27 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ನಾನು ಉಳಿತಾಯ ಬಜೆಟ್ ಮಂಡಿಸಿದ್ದೆ. ಆದರೆ ಅವರು ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಸರಿಯಾದ ನಿರ್ದೇಶನವಿಲ್ಲದೆ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದರು.
ಶಿಕ್ಷಣಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ. ನಾವು ಶೇ. 11ರಷ್ಟು ಅನುದಾನ ಇಟ್ಟಿದ್ದೆವು. ಈಗ ಶೇ. 10ರಷ್ಟು ಆಗಿದೆ. ಆರೋಗ್ಯ ವಲಯಕ್ಕೆ ಶೇ.5ರಷ್ಟು ಅನುದಾನ ಮೀಸಲಿತ್ತು. ಈಗ ಶೇ.4ರಷ್ಟಾಗಿದೆ. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೃಷಿ, ತೋಟಗಾರಿಕೆ ಹೀಗೆ ಎಲ್ಲದರಲ್ಲಿಯೂ ಅನುದಾನ ಹಂಚಿಕೆ ಕಡಿಮೆಯಾಗಿದೆ. ಹೀಗಾದಲ್ಲಿ ಅಭಿವೃದ್ಧಿ ಹೇಗಾಗಲಿದೆ. 21 ಸಾವಿರ ಕೋಟಿ ಹೆಚ್ಚಿನ ಆದಾಯ ಸಂಗ್ರಹ ಮಾಡುವುದಾಗಿ ಹೇಳಿದ್ದಾರೆ. ಅಷ್ಟು ಹೆಚ್ಚು ಆದಾಯ ಬಂದಲ್ಲಿ ಹೆಚ್ಚಿನ ಸಾಲ ಮಾಡುವ ಅಗತ್ಯವಿರುವುದಿಲ್ಲ. ಆರ್ಥಿಕ ಶಿಸ್ತು ಬಗ್ಗೆ ಮಾತನಾಡುತ್ತಿದ್ದೀರಾ, ಎಲ್ಲಿದೆ ಆರ್ಥಿಕ ಶಿಸ್ತು? ಎಂದು ಪ್ರಶ್ನಿಸಿದರು.
ಪೆಂಡಿಂಗ್ ಬಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಅಧಿಕಾರ ಬಿಟ್ಟಾಗ ಎಷ್ಟು ಪೆಂಡಿಂಗ್ ಬಿಲ್ ಇತ್ತು ಗೊತ್ತಾ?. ವಸತಿ ಯೋಜನೆ ಒಂದಕ್ಕೆ 15 ಸಾವಿರ ಕೋಟಿ ಬೇಕಿತ್ತು. ಆದರೆ ಅವರು ಇಟ್ಟಿದ್ದು ಕೇವಲ 3 ಸಾವಿರ ಕೋಟಿ ಮಾತ್ರ ಎಂದು ತಿರುಗೇಟು ನೀಡಿದರು.
ರಿವರ್ಸ್ ಗೇರ್ ಬಜೆಟ್ : ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ರಿವರ್ಸ್ ಗೇರ್ ಬಜೆಟ್ ಮಂಡಿಸಿದ್ದಾರೆ. ಟೀಕೆಗೆ ಹೆಚ್ಚಿನ ಪ್ಯಾರಾ ಬಳಕೆಯಾಗಿದೆ. ಬಜೆಟನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗೆ ಬಳಕೆ ಮಾಡಿಕೊಂಡಿರುವುದು ಇದೇ ಮೊದಲು. ಟೀಕೆ ಮಾಡಲು ಬೇಕಾದಷ್ಟು ವೇದಿಕೆ ಇವೆ. ಆದರೂ ಇಲ್ಲಿ ಟೀಕೆ ಮಾಡಿದ್ದಾರೆ. ದ್ವೇಷದ ರಾಜಕಾರಣ ಇಲ್ಲೂ ಮಾಡಿದ್ದಾರೆ ಎಂದರು.
ಜನರನ್ನು ಟ್ರ್ಯಾಪ್ ಮಾಡುವ ಚಿಂತನೆ ಅವರ ಪ್ರಣಾಳಿಕೆಯಲ್ಲಿತ್ತು. ಅದೇ ಈ ಬಜೆಟನಲ್ಲೂ ಮುಂದುವರೆದಿದೆ. ಇದು ಪ್ರತಿಪಕ್ಷ ನಾಯಕರಿಗೆ ತಲೆ ತಿರುಗುವ ಬಜೆಟ್ ಎಂದಿದ್ದಾರೆ. ಆದರೆ ಯಾವ ಸಚಿವರು ಹೀಗೆಂದಿದ್ದಾರೋ ಅವರಿಗೆ ಇಷ್ಟು ಬೇಗ ಮದ ತಲೆಗೆ ಹತ್ತಬಾರದಿತ್ತು ಎಂದು ಟಕ್ಕರ್ ನೀಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕೆ : ಕೋರ್ಟ್ ಆದೇಶ ಎಲ್ಲರೂ ಗೌರವಿಸಬೇಕು, ಸಮಾನತೆ, ಕಾನೂನು ಬಗ್ಗೆ ರಾಹುಲ್ ಗಾಂಧಿ ಬಹಳ ಮಾತನಾಡುತ್ತಾರೆ. ಆದರೆ ಈಗ ಮಾಡುತ್ತಿರುವುದೇನು? ಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ಮಾಡಿದರೆ ಅದು ನ್ಯಾಯಾಂಗ ನಿಂದನೆಯಲ್ಲವೇ? ಸಂವಿಧಾನ, ಪ್ರಜಾಪ್ರಭುತ್ವದ ವಿರುದ್ಧ ಹೋಗುತ್ತಿದ್ದಾರೆ. ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.
ಪ್ರತಿಪಕ್ಷ ನಾಯಕ ಇಲ್ಲದಿದ್ದಕ್ಕೆ ಏನಾಯಿತು, ಬಜೆಟ್ ಮಂಡನೆಗೂ ಇದಕ್ಕೂ ಸಂಬಂಧ ಇಲ್ಲ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಇಲ್ಲದೆ ಐದು ಬಜೆಟ್ ಮಂಡನೆಯಾಗಿದೆ ಎಂದು ಪ್ರತಿಪಕ್ಷ ನಾಯಕರ ಆಯ್ಕೆ ವಿಳಂಬವನ್ನು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
ಇದನ್ನೂ ಓದಿ : ಸಿದ್ದರಾಮಯ್ಯ ಬಜೆಟ್: ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣಸ್ತಿವೆ ಎಂದ ಪ್ರಹ್ಲಾದ್ ಜೋಶಿ