ಬೆಂಗಳೂರು: ವಿದ್ಯುಚ್ಛಕ್ತಿ ಇಲಾಖೆಯವರು ಯದ್ವಾತದ್ವಾ ವಿದ್ಯುತ್ ದರ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ದಿನಸಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸಿದ ಸಂದರ್ಭ ದುಬಾರಿ ವಿದ್ಯುತ್ ಬಿಲ್, ಕೇಂದ್ರ ಸರ್ಕಾರದ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿ, ಮೊದಲೇ ಜನ ಸಂಕಷ್ಟದಲ್ಲಿದ್ದಾರೆ. ಇದು ದೊಡ್ಡ ಹೊರೆಯಾಗಲಿದೆ ಎಂದ್ರು.
ಜನ ಕಷ್ಟದಲ್ಲಿದ್ದಾರೆ, ಎಲ್ಲಿಂದ ಹಣ ತರಲು ಸಾಧ್ಯ. ಸರ್ಕಾರ ಕೂಡಲೇ ಸಮಸ್ಯೆ ಸರಿಪಡಿಸಬೇಕು. ಎರಡು, ಮೂರು, ನಾಲ್ಕು ಪಟ್ಟು ಹೆಚ್ಚು ವಿದ್ಯುತ್ ಬಿಲ್ ಬಂದಿದೆ. ಇದು ಬಿಲ್ ಹೆಚ್ಚಿಸುವ ಕಾಲ ಅಲ್ಲ. ಇದುವರೆಗೂ ನಾವು ಕೋವಿಡ್ ಹಿನ್ನೆಲೆ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೆವು. ಇದೀಗ ಬೀದಿಗಿಳಿದು ಹೋರಾಡುವ ಸಮಯ ಬಂದಿದೆ ಎಂದು ಹೇಳಿದರು.
ಸರ್ಕಾರ ಬಡವರ ಪರವಾಗಿ ಇರಬೇಕು. ಯಡಿಯೂರಪ್ಪ ಸರ್ಕಾರ ಹೇಳುವುದೊಂದು, ಮಾಡುವುದೊಂದು. ಇದರಿಂದ ಇವರ ನಿಲುವನ್ನು ನಾವು ವಿರೋಧಿಸುತ್ತೇವೆ. ಬಂಡವಾಳಶಾಹಿಗಳು, ಉಳ್ಳವರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಎಪಿಎಂಸಿ ಕಾಯ್ದೆ ಬದಲಿಸುವ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ. ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ನೀಡುವುದಾಗಿ ಹೇಳಿ, 3 ಲಕ್ಷ ಕೋಟಿ ರೂ.ನಷ್ಟು ಮೊತ್ತದ ವಿವರ ಪ್ರಕಟಿಸಿದೆ. ವಲಸೆ ಕಾರ್ಮಿಕರಿಗೆ, ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಸರ್ಕಾರ ಏನೂ ಕೊಟ್ಟಿಲ್ಲ. ಎಂಎಸ್ಎಂಇ ಕ್ಷೇತ್ರಕ್ಕೆ ಸೌಕರ್ಯ ಕೊಡಲೇಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಸೌಮ್ಯ ರೆಡ್ಡಿ, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಎಂ.ಸಿ. ವೇಣುಗೋಪಾಲ್ ಹಾಜರಿದ್ದರು.