ಬೆಂಗಳೂರು: ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹಾಲಪ್ಪ ಆಚಾರ್ ಕೇಳಿದ ಕೃಷಿ ಇಲಾಖೆಯ ಖಾಲಿ ಹುದ್ದೆಯ ಭರ್ತಿ ಬಗ್ಗೆ ಉತ್ತರಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ರಾಜ್ಯದಲ್ಲಿ ಕೃಷಿ ಇಲಾಖೆಯ ಒಟ್ಟು 8,149 ಹುದ್ದೆಗಳಲ್ಲಿ 4,303 ಹುದ್ದೆಗಳು ಭರ್ತಿಯಾಗಿದ್ದು 3,846 ಖಾಲಿ ಇವೆ. ಇವುಗಳ ಭರ್ತಿಗೆ ಆರ್ಥಿಕ ತೊಂದರೆಯಿಂದ ಹುದ್ದೆ ಭರ್ತಿ ಮಾಡಿಲ್ಲ. ಆದರೆ ಕೃಷಿ ಇಲಾಖೆ ಸುಗಮವಾಗಿ ಸಾಗಲು 2,235 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಶಿವಲಿಂಗೇ ಗೌಡ, 140 ರಿಂದ 150 ಜನ ಕೆಲಸ ಮಾಡುವ ಜಾಗದಲ್ಲಿ 12 ಜನ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಕೃಷಿ ಇಲಾಖೆ ಪ್ರಧಾನವಾದದ್ದು. ನೀವು ಗೊಬ್ಬರ ಒದಗಿಸುತ್ತಿದ್ದೀರಿ ಅದನ್ನು ನಾವು ಶ್ಲಾಘಿಸುತ್ತೇವೆ. ಆದರೆ ನೀವು ಕೊಟ್ಟ ಗೊಬ್ಬರ ಹಾಕಲು ರೈತರಿಗೆ ಮಾಹಿತಿ ಒದಗಿಸಲು ಜನರ ಕೊರತೆ ಎದುರಾಗಿದೆ. ಹೊರ ಗುತ್ತಿಗೆ ಮೇಲೂ ಯಾರನ್ನು ತೆಗೆದುಕೊಂಡಿಲ್ಲ. ಇಂತಹ ಸ್ಥಿತಿಯಲ್ಲಿ ಕೃಷಿ ಇಲಾಖೆ ನಡೆಯುವುದಾದರೆ ದೇಶಕ್ಕೆ ಗಂಡಾಂತರ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು. ಇದೇ ವೇಳೆ ‘ಈ ರೈತನ ಕಣ್ಣಲ್ಲಿ ಕಣ್ಣೀರು ತರಿಸಬೇಡಿ, ಮುಕ್ಕಾಲು ಭಾಗದಷ್ಟು ಜನ ಈ ದೇಶದಲ್ಲಿ ವ್ಯವಸಾಯ ಮಾಡುತ್ತಾರೆ’ ಎಂದು ಮಹಾತ್ಮ ಗಾಂಧಿ ಹೇಳಿದ ಮಾತನ್ನು ನೆನೆದರು.
113 ಜನ ಅಧಿಕಾರಿಗಳದ್ದು ಸ್ಯಾಂಕ್ಷನ್ ಪೋಸ್ಟ್ ಇದೆ. ಇರೋದೆ 10 ಜನ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ವಿನಿಯೋಗ ಮಾಡುವುದು ಯಾವ ಅಧಿಕಾರಿಗಳು? ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.
ಇದನ್ನೂ ಓದಿ: ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತ ಸಿದ್ದರಾಮಯ್ಯ ಒಪ್ಕೊತಾರಾ?: ಸಚಿವ ಕೆ.ಎಸ್.ಈಶ್ವರಪ್ಪ
ಇದಕ್ಕೆ ಉತ್ತರಿಸಿದ ಸಚಿವ ಬಿ.ಸಿ. ಪಾಟೀಲ್, ನಾನು ಈಗಾಗಲೇ ಹೇಳಿದೆ 3,846 ಖಾಲಿ ಇವೆ ಅಂತಾ. ಈ ಬಾರಿ ಕೋವಿಡ್ ಕಾರಣದಿಂದ ಸರ್ಕಾರ ಯಾವುದೇ ಹುದ್ದೆಗಳ ಭರ್ತಿಗೆ ಅವಕಾಶ ನೀಡಿಲ್ಲ ಎಂದರು.
ಇದರಿಂದ ಆಕ್ರೋಶಗೊಂಡ ಶಾಸಕ ಶಿವಲಿಂಗೇ ಗೌಡ, ಕೋವಿಡ್ಗೂ ಇದಕ್ಕೂ ಏನು ಸಂಬಂಧ. ಈ ರಾಜ್ಯದಲ್ಲಿ ಎಲ್ಲ ಇಲಾಖೆಗಳು ಹೊರ ಗುತ್ತಿಗೆ ಮೇಲೆ ನಡೆಯುತ್ತಿವೆ. ನಿಮ್ಮ ಇಲಾಖೆಯಲ್ಲೂ ನೇಮಿಸಿಕೊಳ್ಳಿ. ಸುಮಾರು 88% ಹುದ್ದೆಗಳು ಕೃಷಿ ಇಲಾಖೆ ಒಂದರಲ್ಲೇ ಖಾಲಿ ಇವೆ ಎಂದು ಹೇಳಿದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಬಿಲ್ ತಂದೇ ತರ್ತೇವೆ: ಸಚಿವ ಪ್ರಭು ಚವ್ಹಾಣ್
ನಾನು ಬಂದ ಮೇಲೆ ಈ ಹುದ್ದೆಗಳು ಖಾಲಿಯಾಗಿರುವುದಲ್ಲ. ಮೊದಲಿನಿಂದಲೂ ಇವೆ. ಆದರೆ ನಾನು ಬಂದ ಮೇಲೆ ಭರ್ತಿ ಮಾಡಲು ಕೊರೊನಾ ಬಂತು. ಖಾಲಿ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಬಿ ಸಿ ಪಾಟೀಲ್ ತಿಳಿಸಿದರು.