ಬೆಂಗಳೂರು : ಕೆಲಸ ಮಾಡುತ್ತಿದ್ದ ಮನೆಯ ಬಳಿಯೇ ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಹೆಚ್ಎಸ್ಆರ್ ಲೇಔಟ್ ಎರಡನೇ ಸೆಕ್ಟರ್ನಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ವೆಂಕಟರಮಣ ನಾಯಕ್ (35) ಎಂಬಾತನ ಶವ ಆತ ಕೆಲಸ ಮಾಡುತ್ತಿದ್ದ ಮನೆಯ ಬಾತ್ ರೂಮ್ ಬಳಿ ಪತ್ತೆಯಾಗಿದ್ದು, ಪರಿಚಿತರಿಂದಲೇ ಹತ್ಯೆಯಾಗಿರುವ ಅನುಮಾನ ವ್ಯಕ್ತವಾಗಿದೆ.
ಕ್ರೋಮಾ ಸ್ಟೋರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೆಂಕಟರಮಣ ನಾಯಕ್, ರಾತ್ರಿ ವೇಳೆ ಹೆಚ್ಎಸ್ಆರ್ ಲೇಔಟ್ ಎರಡನೇ ಸೆಕ್ಟರಿನ ಮನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಅಲ್ಲಿಯೇ ವಾಸವಿದ್ದರು. ಆದರೆ, ಬುಧವಾರ ಬೆಳಗ್ಗೆ 'ಬಾತ್ ರೂಮ್ ಬಳಿ ಅನುಮಾನಾಸ್ಪದವಾಗಿ ತನ್ನ ಗಂಡ ವೆಂಕಟರಮಣನ ಶವ ಪತ್ತೆಯಾಗಿದೆ' ಎಂದು ಆತನ ಪತ್ನಿ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದಾಗ ವೆಂಕಟರಮಣ ಹತ್ಯೆ ಆಗಿರುವುದು ತಿಳಿದು ಬಂದಿದೆ. ಮೃತನ ತಂದೆಯಿಂದ ದೂರು ಪಡೆದಿರುವ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಮೃತನ ಪತ್ನಿ ಹಾಗೂ ಇಬ್ಬರು ಮಕ್ಕಳು ಅದೇ ಮನೆಯಲ್ಲಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಪರಿಚಿತರೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮತ್ತಷ್ಟು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಅವರು ತಿಳಿಸಿದ್ದಾರೆ.
ಮಾಲೀಕನ ಪತ್ನಿ ಕೊಲೆ ಮಾಡಿದ್ದ ಆರೋಪಿ ಬಂಧನ (ಪ್ರತ್ಯೇಕ ಘಟನೆ) : ಗೃಹಿಣಿ ಹತ್ಯೆ ಮಾಡಿ, ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಜನೀಶ್ ಕುಮಾರ್ ಬಂಧಿತ ಆರೋಪಿ. ಜನವರಿ 4ರಂದು ಎಲೆಕ್ಟ್ರಾನಿಕ್ ಸಿಟಿಯ ಪ್ರಭಾಕರ್ ರೆಡ್ಡಿ ಲೇಔಟ್ನಲ್ಲಿರುವ ಮನೆಯಲ್ಲಿ ನೀಲಂ (30) ಎಂಬುವರನ್ನು ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆರೋಪಿ ಮನೆಯಲ್ಲಿದ್ದ ಎಂಟು ಸಾವಿರ ರೂಪಾಯಿ ನಗದು ಹಾಗೂ ಕಿವಿಯೋಲೆ ಕದ್ದು ಪರಾರಿಯಾಗಿದ್ದ ಎಂಬುದಾಗಿ ತಿಳಿದು ಬಂದಿದೆ.
ಮೃತ ನೀಲಂಳ ಪತಿ ಪ್ರದ್ಯುಂ ಪೇಂಟಿಂಗ್ ಕಾಂಟ್ರಾಕ್ಟರ್ ಆಗಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಾರ್ಡ್‌ವೇರ್ ಶಾಪ್ ಹೊಂದಿದ್ದಾರೆ. ಪೇಂಟ್ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಸಹಾಯಕ್ಕೆ ಬರುತ್ತಿದ್ದ ರಜನೀಶ್ ಕುಮಾರ್ ಕಳೆದ ಒಂದೂವರೆ ವರ್ಷದಿಂದ ಪ್ರದ್ಯುಂ ಕುಟುಂಬಕ್ಕೆ ಪರಿಚಿತನಾಗಿದ್ದ. ಇಬ್ಬರು ಉತ್ತರ ಪ್ರದೇಶದವರಾಗಿದ್ದು, ಮನೆಯ ಸದಸ್ಯರ ಪರಿಚಯವಿತ್ತು. ಪೇಂಟ್ ಅಂಗಡಿಯಲ್ಲಿ ವ್ಯಾಪಾರವಾಗುತ್ತಿದ್ದ ಹಣವನ್ನು ಪ್ರದ್ಯುಂ ಮನೆಗೆ ತೆಗೆದುಕೊಂಡು ಹೋಗುವುದರ ಬಗ್ಗೆಯೂ ಆರೋಪಿಗೆ ಮಾಹಿತಿ ಇತ್ತು. ಆದ್ದರಿಂದ ಮನೆಯಲ್ಲಿ ನೀಲಂ ಒಬ್ಬಳೇ ಇದ್ದಾಗ ಹಣ ದೋಚುವ ಸಂಚು ರೂಪಿಸಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉದ್ಯಮದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ಅಸೂಯೆ; ಮಾಲೀಕನ ಪತ್ನಿ ಕೊಲೆ ಮಾಡಿದ್ದ ಆರೋಪಿ ಬಂಧನ