ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಮಹಾನಗರಗಳಲ್ಲೂ ಶಾಲೆಗಳನ್ನು ಪುನಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಶಾಲೆ ತೆರೆಯುವುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
0-5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ಇದೆ. ಆದರೆ ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ನಾವು ಶೈಕ್ಷಣಿಕ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದೆಂದು ಅನಿಸುತ್ತದೆ. 1ರಿಂದ 10ನೇ ತರಗತಿಯ 1250 ಮಕ್ಕಳಲ್ಲಿ ಬುಧವಾರ ಕೊರೊನಾ ದೃಢಪಟ್ಟಿದೆ. ಒಟ್ಟು 6752 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಒಂದೇ ದಿನ, ಪಿಯುಸಿ ಓದುತ್ತಿರುವ 166 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. 897 ಆ್ಯಕ್ಟಿವ್ ಕೇಸ್ನಲ್ಲಿ ಪಿಯುಸಿ ಮಕ್ಕಳಿದ್ದಾರೆ ಎಂದು ಸಚಿವರು ಹೇಳಿದರು.
ಈ ಹಿಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಳೆದ ಎರಡು ಕೋವಿಡ್ ಅಲೆಯಿಂದ ಶಿಕ್ಷಣ ಇಲಾಖೆ ಕಡೆಯಿಂದ ಆದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೆವು. ಕಳೆದ ಬಾರಿಯಂತೆ ರಾಜ್ಯದಲ್ಲಿ ಒಂದೇ ಬಾರಿ ಶಾಲೆ ಬಂದ್ ಮಾಡಬಾರದೆಂದು ನಿರ್ಣಯ ತೆಗೆದುಕೊಂಡೆವು. ಜಿಲ್ಲಾಧಿಕಾರಿಗಳಿಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಅನೇಕ ಜಿಲ್ಲೆಗಳಲ್ಲಿ ಈಗಲೂ ಕೂಡ ಸಂಪೂರ್ಣವಾಗಿ ಶಾಲೆಗಳು ಬಂದ್ ಆಗಿಲ್ಲ. ಮೈಸೂರು, ತುಮಕೂರು ಸೇರಿ ಕೆಲವು ಮಹಾನಗರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಈವರೆಗೂ ಕೋವಿಡ್ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಿಲ್ಲ ಎಂದರು.
ನಾಳೆ ನಡೆಯುವ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ ಶೇ. 80 ರಷ್ಟು ಪಠ್ಯ ಕ್ರಮ ಕಂಪ್ಲೀಟ್ ಮಾಡಿದ್ದೇವೆ. ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ಪರಿಶೀಲನೆ ಮಾಡಿದ್ದೇವೆ. ನಾಳೆ ಸಿಎಂ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಒಟ್ಟು 48 ಸಾವಿರ ಶಾಲೆಗಳಲ್ಲಿ 146 ಶಾಲೆಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಲಿರುವ ಡಿಕೆಶಿ... ಕಾರಣ?
ಕೋಲಾರಲ್ಲಿ 2 , ತುಮಕೂರು 32, ಚಿತ್ರದುರ್ಗ 6, ಚಿಕ್ಕಮಗಳೂರು 7 ಕೊಪ್ಪಳ 2, ದಾವಣಗೆರೆ 6, ಚಿಕ್ಕೋಡಿ 3, ಗದಗ ಜಿಲ್ಲೆಯಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 11 ಶಾಲೆಗಳು ಕ್ಲೋಸ್ ಆಗಿವೆ. ಅಂಕಿ ಅಂಶಗಳನ್ನು ನೋಡುವುದಾದರೆ, 0-5 ವರ್ಷದ ಮಕ್ಕಳಲ್ಲಿ - 13.01% ಪಾಸಿಟಿವ್, 6-15 ವರ್ಷದ ಮಕ್ಕಳಲ್ಲಿ- 5.94 % ಪಾಸಿಟಿವ್, 16-20 ವರ್ಷದ ವಿದ್ಯಾರ್ಥಿಗಳು- 8.17% ಪಾಸಿಟಿವ್ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.
ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಕೌನ್ಸೆಲಿಂಗ್ ಮೂಲಕವೇ ಎಲ್ಲಾ ಪ್ರಕ್ರಿಯೆ ನಡೆದಿದೆ. ಶಿಕ್ಷಕರೇ ಉತ್ತಮ ಕೌನ್ಸೆಲಿಂಗ್ ಅಂತ ಹೇಳಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದರು.