ಬೆಂಗಳೂರು : ವಸತಿ ಸಚಿವ ವಿ ಸೋಮಣ್ಣ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಈ ಬಾರಿ ಅವರು ಚುನಾವಣೆಗೆ ನಿಲ್ಲುವುದು ಖಚಿತ. ಬಿಜೆಪಿ ಟಿಕೆಟ್ನಿಂದಲೇ ಸೋಮಣ್ಣ ಸ್ಪರ್ಧೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸೋಮಣ್ಣ ಪಕ್ಷ ತೊರೆಯಲಿದ್ದಾರೆ ಎನ್ನುವುದು ಕೇವಲ ಊಹಾಪೋಹ ಮಾತ್ರ. ಯಾವ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ. ನಿನ್ನೆಯಷ್ಟೇ ಅವರು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಭೇಟಿ ಮಾಡಿ ಸಮಾಲೋಚನೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ನಿಂದ ಸೂಚನೆ ಬಂದಿದೆ. ಅದರಂತೆ ನಾನು ಚಾಮರಾಜನಗರದಲ್ಲಿ ಕೆಲಸ ಮಾಡಬೇಕು ಎಂದಿದ್ದೇನೆ. ಉಳಿದ ವಿಚಾರ ಖುದ್ದಾಗಿ ಮಾತನಾಡೋಣ ಎಂದಿದ್ದಾರೆ. ಅದರಂತೆ ಇಂದು ಅವರನ್ನು ಭೇಟಿ ಮಾಡಲಿದ್ದೇನೆ ಎಂದರು.
ಸೋಮಣ್ಣ ಬಿಜೆಪಿಯಲ್ಲಿಯೇ ಇರಲಿದ್ದಾರೆ-ಅಶೋಕ್: ಸೋಮಣ್ಣಗೆ ಟಿಕೆಟ್ ಸಿಗುತ್ತೋ ಇಲ್ಲವೋ ಎನ್ನುವ ಅನುಮಾನ ಬೇಡ. ಸೋಮಣ್ಣ ಹಿರಿಯ ರಾಜಕಾರಣಿ. ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅವರು ಬಿಜೆಪಿಯಲ್ಲಿಯೇ ಇರಲಿದ್ದಾರೆ. ಬಿಜೆಪಿ ಟಿಕೆಟ್ನಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಈ ಎಲ್ಲಾ ವಿಚಾರವನ್ನು ಈಗಾಗಲೇ ಕೇಂದ್ರದ ನಾಯಕರು ಸೋಮಣ್ಣ ಜೊತೆ ಮಾತನಾಡಿದ್ದಾರೆ ಎಂದು ಅಶೋಕ್ ಸ್ಪಷ್ಟೀಕರಣ ನೀಡಿದರು.
ಈ ಹಿಂದೆ ಕಾಂಗ್ರೆಸ್ ತೊರೆದಿದ್ದ ಬಾಬುರಾವ್ ಚಿಂಚನಸೂರ್ ನಮ್ಮ ಪಕ್ಷಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿಗೆ ಬಂದಿದ್ದೆ ಎಂದಿದ್ದರು. ಈಗ ಯಾವ ಮುಖ ಇರಿಸಿಕೊಂಡು ಕಾಂಗ್ರೆಸ್ಗೆ ಹೋಗುತ್ತಿದ್ದಾರೋ ಗೊತ್ತಿಲ್ಲ ಎಂದು ಚಿಂಚನಸೂರ್ ಪಕ್ಷಾಂತರಕ್ಕೆ ಅಶೋಕ್ ವ್ಯಂಗ್ಯವಾಡಿದರು.
ಬಿಜೆಪಿ ತಲೆಕೆಡಿಸಿಕೊಳ್ಳಲ್ಲ-ಅಶೋಕ್ : ನಮ್ಮಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮವಿದೆ. ನಮ್ಮಲ್ಲಿ ಎಂಎಲ್ಸಿ, ಎಂಪಿ ಆದವರಿಗೆ ಎಂಎಲ್ಎ ಟಿಕೆಟ್ ಕೊಡಲ್ಲ. ಆದರೆ ಚಿಂಚನಸೂರ್ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡಿದ್ದರೂ ಶಾಸಕರಾಗುವ ಆಸೆ ಅದಕ್ಕೆ ಹೋಗಿದ್ದಾರೆ. ಅದಕ್ಕೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್ನಿಂದ ಬಂದಿದ್ದರು ಕಾಂಗ್ರೆಸ್ಗೆ ಹೋಗುತ್ತಿದ್ದಾರೆ ಅಷ್ಟೇ ಎಂದರು.
ಯಾವುದೇ ಯೋಜನೆಯ ಉದ್ಘಾಟನೆಗೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ. ಎಕ್ಸ್ಪ್ರೆಸ್ ವೇ ವಿಚಾರದಲ್ಲಿಯೂ ಟೀಕೆ ಮಾಡಿದ್ದರು. ದೇಶದಲ್ಲಿ ಎಷ್ಟು ಹೈವೆ ನಿರ್ಮಾಣವಾಗಿve, ಅಲ್ಲೆಲ್ಲಾ ಯಾಕೆ ಇವರು ಟೀಕೆ ಮಾಡಲಿಲ್ಲ, ಸಾವಿರಾರು ರಸ್ತೆ ಉದ್ಘಾಟನೆಯಾಗಿವೆ. ಅದರ ಬಗ್ಗೆ ಒಂದೇ ಒಂದು ಟ್ವೀಟ್ ಇಲ್ಲ. ಹೇಳಿಕೆಯೂ ಇಲ್ಲ. ಈಗ ಎಕ್ಸ್ಪ್ರೆಸ್ ವೇ ಟೀಕಿಸಿದ್ದಲ್ಲದೆ ಮೆಟ್ರೋ ಮಾರ್ಗದ ಉದ್ಘಾಟನೆಯನ್ನೂ ಟೀಕಿಸುತ್ತಿದ್ದಾರೆ.
ಕಾಂಗ್ರೆಸ್ಗೆ ಯಾವುದೇ ಲಾಭವೂ ಇಲ್ಲ: ಚುನಾವಣೆ ಬಂದಿದೆ ಎಂದು ಈ ರೀತಿ ಟೀಕೆ ಮಾಡುತ್ತಿದೆ. ಜನಕ್ಕೆ ಬೇಕಾಗಿರುವುದು ಅಭಿವೃದ್ಧಿ. ಅದನ್ನು ಮೋದಿ ಸರ್ಕಾರ, ಬೊಮ್ಮಾಯಿ ಸರ್ಕಾರ ಮಾಡುತ್ತಿವೆ. ಹಾಗಾಗಿ ಜನತೆ ಕಾಂಗ್ರೆಸ್ನ ಟೀಕೆಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಟೀಕೆಗಳಿಂದ ಕಾಂಗ್ರೆಸ್ಗೆ ಯಾವುದೇ ಲಾಭವೂ ಇಲ್ಲ ಎಂದು ಸಚಿವ ಅಶೋಕ್ ಹೇಳಿದರು.
ಇದನ್ನೂ ಓದಿ : ಅಧಿಕಾರಕ್ಕಾಗಿ ಕಾಂಗ್ರೆಸ್ನವರು ತಿರುಕನ ಕನಸು ಕಾಣುತ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ