ನವದೆಹಲಿ/ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಾಲ ನೀಡಿರುವ ವಿಚಾರ ಸಂಬಂಧ ಮಾಜಿ ಶಾಸಕ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಅಂತೆಯೇ ಇಡಿ ವಿಚಾರಣೆಗಾಗಿ ರಾಜಣ್ಣ ಅವರು ದೆಹಲಿಗೆ ಬಂದಿಳಿದಿದ್ದಾರೆ. ಈ ವೇಳೆ, ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೀಡಿದ ಸಾಲದ ಬಗ್ಗೆ ವಿಚಾರಣೆ ಮಾಡೋ ಸಾಧ್ಯತೆ ಇದೆ. ಇದು ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯ ಆಗಿದೆ, ಸಾಲ ನೀಡಿದ್ದು ತಪ್ಪೇನಲ್ಲ. ಆದರೆ, ಸಾಲ ನೀಡುವಾಗ ಪ್ರೊಮೋಟರ್ಸ್ ಈಕ್ವಿಟಿ ಅಂತ ದುಡ್ಡನ್ನು ಇನ್ವೆಸ್ಟ್ ಮಾಡಬೇಕಾಗುತ್ತೆ. ಪ್ರೊಮೋಟರ್ಸ್ ಈಕ್ವಿಟಿ ಮೂಲದ ಬಗ್ಗೆ ಕೇಳೋ ಸಾಧ್ಯತೆಯೂ ಇದೆ. ನನಗೆ ಗೊತ್ತಿರೋ ಮಾಹಿತಿ ಕೊಡುತ್ತೇನೆ. ವಿಚಾರಣೆ ಮಾಡೋ ಬಗ್ಗೆ ನನಗೆ ಯಾವ ಭಯವೂ ಇಲ್ಲ. ತಪ್ಪು ಮಾಡಿರೋನು ಹೆದರುತ್ತಾನೆ. ನಾನು ಎಂಥಾ ವ್ಯಕ್ತಿ ಅನ್ನೋದು ನನ್ನ ಜನರಿಗೆ ಗೊತ್ತು. ನನ್ನ ವ್ಯವಹಾರಗಳು ಕೂಡ ಪಾರದರ್ಶಕವಾಗಿದೆ ಎಂದಿದ್ದಾರೆ.
ಇನ್ನು ಈಗಾಗಲೇ ಡಿ.ಕೆ.ಶಿವಕುಮಾರ್ ಪ್ರಕರಣ ಸಂಬಂಧ ಅವರ ಆಪ್ತರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಇಡಿ ತಿಳಿಸಿತ್ತು. ಹಾಗೇ ಲಕ್ಷ್ಮಿ ಹೆಬ್ಬಾಳಕ್ಕರ್ ಅವರನ್ನ ಕೂಡ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಕೆಎನ್ ರಾಜಣ್ಣ ಅವರು ತಮ್ಮ ಹರ್ಷಾ ಶುಗರ್ಸ್ಗೆ ಸಾಲ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ. ಆ ಬಳಿಕ ರಾಜಣ್ಣ ಅವರನ್ನು ಇಡಿ ವಿಚಾರಣೆಗೆ ಕರೆದಿದೆ.