ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಐವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 23 ಪೊಲೀಸ್ ಸಿಬ್ಬಂದಿಯನ್ನು 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಿಸಲಾಗಿದೆ.
ಆನಂದರಾವ್ ಸರ್ಕಲ್ ರಾಜ್ ಮಹಲ್ ಹೋಟೆಲ್ನಲ್ಲಿ 23 ಮಂದಿ ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕಳೆದ ಏ. 19ರಂದು ಪಾದರಾಯನಪುರದಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಅಲ್ಲಿನ ಜನರನ್ನು ಕ್ವಾರಂಟೈನ್ಗೆ ಕರೆದೊಯ್ಯುವಾಗ ಏಕಾಏಕಿ 300ಕ್ಕಿಂತ ಹೆಚ್ಚು ಜನರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ 130ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಸರ್ಕಾರದ ಸೂಚನೆಯಂತೆ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಬಂಧಿತರಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 23 ಮಂದಿ ಪೊಲೀಸರಿಗೆ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಪಾದರಾಯಪುರ ಗಲಭೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಹಿರಿಯ ಅಧಿಕಾರಿಗಳು ಸೇರಿದಂತೆ 119 ಪೊಲೀಸರನ್ನು ತಪಾಸಣೆಗೆ ಒಳಪಡಿಸುವ ಸಾಧ್ಯತೆಯಿದೆ.