ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಳ್ಳಬಾರದು ಎಂದು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಸಂತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ನಗರದ ಮಲ್ಲೇಶ್ವರದಲ್ಲಿರುವ ಯದುಗಿರಿ ಯತಿರಾಜ ಮಠದಲ್ಲಿಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಸಂತ ಸಮಾವೇಶ ನಡೆಯಿತು. ಹಿಂದೂ ಸಮಾಜದ ವಿವಿಧ ಸಂತರು ಸಮಾವೇಶದಲ್ಲಿ ಪಾಲ್ಗೊಂಡು, ಗೋ ಹತ್ಯೆ, ಮತಾಂತರ, ಲವ್ ಜಿಹಾದ್, ಹಿಂದೂ ಅವಿಭಕ್ತ ಕುಟುಂಬ ಪದ್ಧತಿ, ಪರಿಸರ ಸಾಮರಸ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ, ನಂತರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಮತ್ತು ಕರ್ನಾಟಕ ಧಾರ್ಮಿಕ ಹಕ್ಕು, ಸ್ವಾತಂತ್ರ್ಯ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬಾರದು ಎನ್ನುವ ಎರಡು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ನಂತರ ಮಾತನಾಡಿದ ಮೇಲುಕೋಟೆ ಯದುಗಿರಿ ಯತಿರಾಜ ಸ್ವಾಮೀಜಿ, "ಗೋಹತ್ಯೆ ನಿಷೇಧಿಸಬೇಕು ಎನ್ನುವುದು ಯಾವುದೇ ರಾಜಕೀಯ ವಿಷಯ ಅಲ್ಲ. ಮತಾಂತರ ನಿಷೇಧವೂ ರಾಜಕೀಯ ವಿಷಯ ಅಲ್ಲ. ಈ ಬಗ್ಗೆ ಕಾನೂನನ್ನು ಹಿಂಪಡೆಯಬಾರದು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಮತಾಂತರ ನಿಷೇಧ ಕಾನೂನು ಹಿಂಪಡೆಯಬಾರದು ಎಂದು ನಿರ್ಣಯ ಅಂಗೀಕರಿಸಿದ್ದು, ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ಸರ್ಕಾರ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದೆ" ಎಂದು ಹೇಳಿದರು.
ನಂತರ ಮಾತನಾಡಿದ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, "ವಿಶ್ವ ಹಿಂದೂ ಪರಿಷತ್ ಸಂತ ಸಮಾವೇಶ ಆಯೋಜಿಸಿದೆ. ಮಲ್ಲೇಶ್ವರದಲ್ಲಿ ಕಾರ್ಯಕ್ರಮ ನಡೆಯಿತು. ಸಮಾಜದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯ, ಧರ್ಮ ಕಾಪಾಡುವ ಬಗ್ಗೆ ಚರ್ಚೆ ನಡೆದಿದೆ. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಯಾವುದೇ ಸಡಿಲಿಕೆ ಆಗಬಾರದು. ಇನ್ನಷ್ಟು ಕಾಯ್ದೆ ಬಲಪಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ".
"ಅವರವರ ಧರ್ಮವನ್ನು ಪಾಲನೆ ಮಾಡೋದು ಸರಿ. ಆದರೆ, ಮತಾಂತರ ಮಾಡುವಂತೆ ಆಗಬಾರದು. ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಿಜೆಪಿ ಸರ್ಕಾರ ಮತಂತಾರ ನಿಷೇಧ ಕಾಯ್ದೆ ತಂದಿತ್ತು. ಅದನ್ನು ಸಡಿಲಿಕೆ ಮಾಡದೆ ಸರ್ಕಾರ ಬಲಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಲವ್ ಜಿಹಾದ್ ಆಗೋಕೆ ಅವಕಾಶವನ್ನು ಕೊಡಬಾರದು ಎಂದು ಚರ್ಚಿಸಲಾಗಿದೆ. ಬಡವನ ದೌರ್ಬಲ್ಯವನ್ನು ಬಳಸಿಕೊಂಡು ಮತಾಂತರ ಮಾಡುವುದನ್ನು ತಡೆಯಬೇಕು. ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಕಾನೂನು ತರಲಾಗಿದೆ. ಅದನ್ನು ಈ ಸರ್ಕಾರ ಕೂಡ ಮುಂದುವರೆಸಬೇಕು. ಯಾವುದನ್ನು ಬದಲಿಸಬಾರದು" ಎಂದರು.
ಸಭೆಯ ನಿರ್ಧಾರಕ್ಕೆ ಬಿಜೆಪಿಯ ಬೆಂಬಲ ಹೋರಾಟ ವಿಚಾರದ ಕುರಿತು ಪ್ರತಿಕ್ರಿಯಿಸಿ,"ಕಾನೂನು ತಂದಿದ್ದೇ ಬಿಜೆಪಿ ಸರ್ಕಾರ. ಈ ವಿಚಾರದಲ್ಲಿ ನಾವು ಸಾಕಷ್ಟು ಬದ್ದರಾಗಿದ್ದೇವೆ. ಕಾನೂನಿನ ಬಗ್ಗೆ, ಸಮಾಜದ ಬಗ್ಗೆ ಕೂಡ ಜನರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶವನ್ನು ಸಂತರು ನೀಡಿದ್ದಾರೆ. ಧರ್ಮಕ್ಕೆ ಧಕ್ಕೆ ತರೋದನ್ನು ಸಹಿಸಲ್ಲ ಎಂದು ಸಂತರು ಹೇಳಿದ್ದಾರೆ. ಬಿಜೆಪಿ ಕೂಡ ಯಾವುದೇ ಸಡಿಲಿಕೆಗೆ ಅವಕಾಶ ಕೊಡುವುದಿಲ್ಲ. ಸದನದ ಒಳಗೆ, ಹೊರಗೆ ಕೂಡ ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಕೆಲಸ ಮಾಡುತ್ತೇವೆ. ನಮ್ಮ ಸ್ಪಷ್ಟವಾದ ನಿಲುವನ್ನು ನಾವು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ : ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ಪುನರ್ ಪರಿಶೀಲನೆ, ಹಿಜಾಬ್ಗೆ ಅವಕಾಶ ನೀಡಿದರೆ ಹೋರಾಟ: ಅಶ್ವತ್ಥನಾರಾಯಣ್