ಬೆಂಗಳೂರು: ಅನಿಯಂತ್ರಿತವಾಗಿ ಹೆಚ್ಚಾಗುತ್ತಿರುವ ಸಿಮೆಂಟ್ ಹಾಗೂ ಸ್ಟೀಲ್ ದರಗಳಿಗೆ ನಿಯಂತ್ರಣ ಹೇರಲು ದರ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರುವುದಾಗಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಮು. ಮೋಹನ್ ಹೇಳಿದರು.
ನಗರದ ಬಿಲ್ಡರ್ಸ್ ಅಸೋಷಿಯೇಷನ್ ಎನ್‌ಜಿವಿ ಕ್ಲಬ್‌ನಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರು ವಿಭಾಗದ ವತಿಯಿಂದ ಬಿಲ್ಡರ್ಸ್ ಡೇ ಪ್ರಯುಕ್ತ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿಮೆಂಟ್ ಹಾಗೂ ಸ್ಟೀಲ್ ಕಟ್ಟಡ ಕಾಮಗಾರಿಯ ಅತ್ಯಂತ ಅವಶ್ಯಕ ಕಚ್ಚಾ ವಸ್ತುಗಳು. ಈ ವಸ್ತುಗಳ ದರವನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸಿಮೆಂಟ್ ಉತ್ಪಾದಕರು ತಮ್ಮಲ್ಲೇ ತಂಡವನ್ನು ರಚಿಸಿಕೊಂಡು ಬೆಲೆಯನ್ನು ಹೆಚ್ಚಿಸುತ್ತಿರುವ ಬಗ್ಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾಂಪಿಟೇಷನ್ ಕಮಿಷನ್ ಗೆ ದೂರು ನೀಡಿತ್ತು. ಇದರ ವಿಚಾರಣೆ ನಡೆಸಿದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಬಿಲ್ಡರ್ಸ್ ಅಸೋಸಿಯೇಷನ್ ಗೆ 6,307 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸಿಕೊಡುವಂತೆ ಆದೇಶ ನೀಡಿದೆ. ಈ ಪ್ರಕರಣದ ಮೇಲ್ಮನವಿಯ ತನಿಖೆ ಇನ್ನೂ ಕೂಡಾ ಸುಪ್ರೀಂ ಕೋರ್ಟಿನಲ್ಲಿದೆ ಎಂದರು.
ಇದೇ ರೀತಿ ಸ್ಟೀಲ್ ಉತ್ಪಾದಕರು ಹೆಚ್ಚಿನ ದರಕ್ಕೆ ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಕೋವಿಡ್ ನಮ್ಮ ಕ್ಷೇತ್ರದ ಮೇಲೆ ಬಹಳ ಆಘಾತಕಾರಿ ಪರಿಣಾಮ ಬೀರಿದೆ. ಇಂತಹ ಸಂಧರ್ಭದಲ್ಲೂ ಶೇಕಡಾ 50 ರಷ್ಟು ದರವನ್ನು ಹೆಚ್ಚಿಸಲಾಗಿದೆ. ಈ ಬೆಳವಣಿಗೆಗಳು ಕಟ್ಟಡ ಕಾಮಗಾರಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬಿರಿದ್ದು, ಇವುಗಳ ಬೆಲೆ ನಿಯಂತ್ರಣ ಮಾಡದಿದ್ದಲ್ಲಿ ಕಾಮಗಾರಿಗಳನ್ನು ಸಂಪೂರ್ಣ ನಿಲ್ಲಿಸಬೇಕಾಗುವ ಸಂದರ್ಭ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿಮೆಂಟ್ ಹಾಗೂ ಸ್ಟೀಲ್ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಈ ಕ್ಷೇತ್ರದ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ. ಇದೇ ದಿಸೆಯಲ್ಲಿ ನಾವು ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರು ವಿಭಾಗದ ಅಧ್ಯಕ್ಷ ಜಿ. ರವೀಂದ್ರ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗೂ ಇಂಜಿನಿಯರ್ಸ್ ಗೆ ತರಬೇತಿ ನೀಡಲು ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸ್ಥಳ ನೀಡುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೆಲವೇ ದಿನಗಳಲ್ಲಿ ನಿವೇಶನ ದೊರಕುವ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಕೆ. ಎಲ್. ಮೋಹನ್ ರಾವ್ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ 2021 ರ ಡೈರಿಯನ್ನು ಬಿಡುಗಡೆಗೊಳಿಸಲಾಯಿತು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ವಿಭಾಗದ ಅಧ್ಯಕ್ಷ ಯು. ಎಂ. ಗುರುಶಾಂತಪ್ಪ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರು ವಿಭಾಗದ ಕಾರ್ಯದರ್ಶಿ ಅಬ್ದುಲ್ ಸತಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.