ಬೆಂಗಳೂರು: ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಉಳಿದರೆ ಶಿಕ್ಷಣ ಎಂಬ ಘೋಷವಾಕ್ಯದೊಂದಿಗೆ ಡಿ.16 ರಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳು ಸಜ್ಜಾಗಿವೆ.
ಗುರು ಬ್ರಹ್ಮ, ಗುರು ವಿಷ್ಣು.. ಗುರು ದೇವೋ ಮಹೇಶ್ವರ ಎಂಬ ವಾಕ್ಯದೊಂದಿಗೆ, ನಮ್ಮ ದೇಶ ಗುರುವಿಗೆ ಹೆತ್ತವರ ನಂತರದ ಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಕೋವಿಡ್ ಕರಿಛಾಯೆ ಹಿನ್ನೆಲೆಯಲ್ಲಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಠ ಸಹಕಾರ ಹಾಗೂ ಅವರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ನಿಂತು ಶಿಕ್ಷಣದ ವ್ಯವಸ್ಥೆಯಲ್ಲಿ ಅವರನ್ನು ಉಳಿಸಿ, ಗೌರವಿಸುವಂತಹ ಕೆಲಸ ಆಗಬೇಕಾಗಿದೆ. ಹಾಗಾಗಿ ನಮ್ಮ ಶಿಕ್ಷಕರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ಜೊತೆಗೂಡಿ, ರಾಜ್ಯಾದ್ಯಂತ ಸಂಘಟನೆಯ ಜಿಲ್ಲಾ ಮುಖಂಡರು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯನ್ನು ಒಳಗೊಂಡಂತೆ ಮೌರ್ಯ ವೃತ್ತದ ಬಳಿ ಡಿ.16ರ ಬುಧವಾರದಂದು ಕಾಲ್ನಡಿಗೆಯಲ್ಲಿ ಫ್ರೀಡಂ ಪಾರ್ಕಿಗೆ ತೆರಳಲಿದ್ದಾರೆ. ಅಲ್ಲಿ ಸಭೆಯನ್ನು ಉದ್ದೇಶಿಸಿ, ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಓದಿ: ಕೊರೊನಾ ಕಾಲದಲ್ಲಿ ನೆರವು... 9 ತಿಂಗಳಿಂದ ಬಡವರ ಹಸಿವು ನೀಗಿಸಿದ ಶಿಶು ಮಂದಿರ ಸಂಸ್ಥೆ
ಖಾಸಗಿ ಶಾಲೆಗಳ ಬೇಡಿಕೆಗಳೇನು?
- ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಕೋವಿಡ್ ಲಸಿಕೆ ಪ್ರಥಮ ಹಂತದಲ್ಲಿ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಉಚಿತವಾಗಿ ನೀಡುವುದು. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಲ್ಲಿ ಆಗಲೇಬೇಕಾದಂತಹ ಕಾರ್ಯ.
- ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಆಹಾರದ ಕಿಟ್ ನೀಡುವುದು.
- ಗೌರವಧನ ಬಿಡುಗಡೆ ಮಾಡುವುದು.
- ರಾಜ್ಯ ಸರ್ಕಾರ ಪ್ರತ್ಯೇಕ ವಿಮೆ ಸೌಲಭ್ಯ ಕಲ್ಪಿಸುವು.
- ಶಿಕ್ಷಣ ಸಂಸ್ಥೆಗಳ ಪುನಾರಂಭ, ದಾಖಲಾತಿ, ಹಾಜರಾತಿ, ಕನಿಷ್ಠ ಮೌಲ್ಯಮಾಪನದ ತೇರ್ಗಡೆ, ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕ ಕಟ್ಟಿ ದಾಖಲಾತಿ ಮಾಡುವ ಬಗ್ಗೆ ಸ್ಪಷ್ಟೀಕರಣದ ಅದೇಶ ಹಾಗೂ ಸಂಘಟನೆ ನೀಡಿರುವ ಪರಿಹಾರಗಳನ್ನು ತಕ್ಷಣ ಇತ್ಯರ್ಥಗೊಳಿಸಬೇಕು ಎಂಬುದು ಕ್ಯಾಮ್ಸ್ ಒತ್ತಾಯಿಸಿದೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.