ಬೆಂಗಳೂರು: ಜೂ. 14ರಂದು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದು, ಅನುಮತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನುಮತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಜೂ. 8ರ ನಂತರ ಅನುಮತಿ ಸಿಗುವ ಸಾಧ್ಯತೆ ಇದೆ. ಅದಕ್ಕೆ 14ರಂದು ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡ್ತಿದ್ದೇವೆ ಎಂದರು.
ಜೂನ್ 8ರಂದು ಖರ್ಗೆ ನಾಮಪತ್ರ ಸಲ್ಲಿಸಲಿರುವ ವಿಚಾರವಾಗಿ ಮಾತನಾಡಿ, ಕಾರ್ಯಕರ್ತರು ಯಾರೂ ಅಂದು ಬರುವುದು ಬೇಡ. ಹಿರಿಯರಷ್ಟೇ ಅಂದು ಇರ್ತೇವೆ. ಫಲಿತಾಂಶ ಘೋಷಣೆ ಆಗುವವರೆಗೆ ತಾಳ್ಮೆಯಿಂದಿರಿ. ಫಲಿತಾಂಶ ಘೋಷಣೆ ಆಗುತ್ತಲೇ ಅವರೇ ನಿಮ್ಮಲ್ಲಿಗೆ ಬರುತ್ತಾರೆ. ಆಗ ಅವರಿಗೆ ಶುಭಾಶಯ ಸಲ್ಲಿಸಬಹುದು. ಎಲ್ಲರೂ ತುಂಬಿಕೊಂಡ್ರೆ ಸಾಮಾಜಿಕ ಅಂತರ ಕಾಯ್ದುಕೊಂಡಂತಾಗಲ್ಲ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬೆಂಬಲ ಸೂಚಿಸುವ ವಿಚಾರವಾಗಿ ಡಿಕೆಶಿ ಮಾತನಾಡಿ, ಈ ಬಗ್ಗೆ ರಾಷ್ಟ್ರೀಯ ನಾಯಕರೇ ತೀರ್ಮಾನ ತೆಗೆದುಕೊಳ್ತಾರೆ. ಅದರ ಬಗ್ಗೆ ನಾವು ತೀರ್ಮಾನ ಮಾಡಲ್ಲ ಎಂದರು.