ಬೆಂಗಳೂರು : ಪಂಚರಾಜ್ಯಗಳ ಫಲಿತಾಂಶದಿಂದ ಬಿಜೆಪಿ ಮತ್ತಷ್ಟು ಬಲವರ್ಧನೆಗೊಂಡಿದ್ದು,ಕಾಂಗ್ರೆಸ್ ಶಕ್ತಿ ಕುಂದಿಸಿದೆ. ಇದರಿಂದ ರಾಜ್ಯ ಕಾಂಗ್ರೆಸ್ ನಾಯಕರಲ್ಲೂ ಅನಿಶ್ಚಿತತೆ ಮೂಡಿದೆ.
ಚುನಾವಣೆ ಮುನ್ನ ಆಪರೇಷನ್ ಹಸ್ತ ಮಾಡುವ ಇರಾದೆಯಲ್ಲಿದ್ದ ಕಾಂಗ್ರೆಸ್ಗೆ ಪಂಚರಾಜ್ಯಗಳ ಫಲಿತಾಂಶದಿಂದ ಹಿನ್ನೆಡೆಯಾಗಿದ್ದು, ಕಾಂಗ್ರೆಸ್ ಪಕ್ಷ ಸೇರುವ ಇರಾದೆಯಲ್ಲಿದ್ದ ಹಲವು ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿ ಪಕ್ಷಕ್ಕೆ ಪಂಚಕಜ್ಜಾಯ ಕೊಟ್ಟರೆ, ಇತ್ತ ಕಾಂಗ್ರೆಸ್ ಪಕ್ಷಕ್ಕೆ ಪಂಚ್ ನೀಡಿದೆ. ಬಿಜೆಪಿ ಪಕ್ಷ ಪಂಚರಾಜ್ಯಗಳ ಚುನಾವಣೆಯಿಂದ ತನ್ನ ಪಾರುಪತ್ಯವನ್ನು ಮತ್ತೆ ಸಾಬೀತು ಮಾಡಿದೆ.
ರಾಜಕೀಯವಾಗಿ ಬಿಜೆಪಿ ಪಕ್ಷ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಿದೆ. ಕಾಂಗ್ರೆಸ್ ಮುಕ್ತ ಭಾರತದ ತನ್ನ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಕಾಂಗ್ರೆಸ್ ಒಂದೊಂದಾಗಿ ರಾಜ್ಯಗಳ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ನಿಧಾನವಾಗಿ ಎಲ್ಲಾ ರಾಜ್ಯಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
ಕಾಂಗ್ರೆಸ್ ಸೇರಲು ಮುಂದಾಗಿದ್ದ ನಾಯಕರಲ್ಲಿ ಗೊಂದಲ : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಈಗ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಿದೆ. ರಾಜ್ಯದಲ್ಲಿ ಗದ್ದುಗೆ ಹಿಡಿಯುವ ಆತ್ಮವಿಶ್ವಾಸದಲ್ಲಿರುವ ಕಾಂಗ್ರೆಸ್, ಪಕ್ಷವನ್ನು ಬಲಪಡಿಸುವ ಕಸರತ್ತು ನಡೆಸುತ್ತಿದೆ. ಅದಕ್ಕಾಗಿ ಆಪರೇಷನ್ ಹಸ್ತ ನಡೆಸುವ ಇರಾದೆಯಲ್ಲಿದೆ. ಜೆಡಿಎಸ್ ಹಾಗೂ ಬಿಜೆಪಿಯ ಎರಡನೇ ಸಾಲಿನ ನಾಯಕರು, ಮುಖಂಡರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ.
ಪ್ರಮುಖವಾಗಿ ಜೆಡಿಎಸ್ ಶಾಸಕರಾದ ಶ್ರೀನಿವಾಸ್ ಗೌಡ, ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್, ವೈಎಸ್‌ವಿ ದತ್ತಾ, ಶಿವಲಿಂಗೇಗೌಡರ ಹೆಸರು ಕಾಂಗ್ರೆಸ್ ಸೇರುವ ನಾಯಕರ ಪಟ್ಟಿಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿತ್ತು. ಆ ಸಂಬಂಧ ಕೆಲ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರೆ, ಇನ್ನು ಕೆಲವರು ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜಕೀಯ ಭವಿಷ್ಯದ ಚಿಂತೆಯಲ್ಲಿ ನಾಯಕರು : ಆದರೆ, ಪಂಚರಾಜ್ಯಗಳ ಫಲಿತಾಂಶದ ಬಳಿಕ ಕಾಂಗ್ರೆಸ್ ಸೇರಲು ಮುಂದಾಗಿದ್ದ ಕೆಲ ನಾಯಕರಲ್ಲಿ ಗೊಂದಲ ಮೂಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಬಲಹೀನವಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿಯುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಅದರ ಜೊತೆಗೆ ಶಕ್ತಿಗುಂದುತ್ತಿರುವ ಕಾಂಗ್ರೆಸ್ ಸೇರಿದರೆ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಏನಾಗಬಹುದು ಎಂಬ ಗೊಂದಲ ಮೂಡಿದೆ. ಹೀಗಾಗಿ, ಕಾಂಗ್ರೆಸ್ ಸೇರಲು ಇಚ್ಚಿಸಿದ್ದ ಇತರೆ ಪಕ್ಷದ ಕೆಲ ನಾಯಕರು ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಮರಳಲು ಮುಂದಾಗಿದ್ದ ವಲಸಿಗರಲ್ಲೂ ಹಿಂಜರಿಕೆ : ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಮರಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಕೆಲ ವಲಸೆ ಸಚಿವರಲ್ಲೂ ಗೊಂದಲ ಮೂಡಿದೆ. ಶಕ್ತಿ ಗುಂದುತ್ತಿರುವ ಕಾಂಗ್ರೆಸ್ಗೆ ಹೋಗುವ ಬದಲು ದಿನೇದಿನೆ ಬಲವರ್ಧಿಸುತ್ತಿರುವ ಬಿಜೆಪಿಯಲ್ಲಿಯೇ ಇರುವುದು ಸೇಫ್ ಎಂಬ ಆಲೋಚನೆ ಮೂಡಿದೆ.