ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ಲಸ್ ವೈರಸ್ ಇನ್ನೂ ಕಂಡುಬಂದಿಲ್ಲ. ಅಧಿಕೃತವಾಗಿ ಪಾಲಿಕೆಗೆ ಈ ಮಾಹಿತಿ ಇಲ್ಲ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ತಿಳಿಸಿದರು. ನಗರದಲ್ಲಿ ಈಗಾಗಲೇ ಒಂದು ಲ್ಯಾಬ್ ಜೊತೆಗೆ ಪಾಲಿಕೆ ಟೈ ಅಪ್ ಮಾಡಿಕೊಂಡಿದ್ದು, ಅವರದ್ದೇ ಖರ್ಚಿನಲ್ಲಿ ಈ ಟೆಸ್ಟಿಂಗ್ ಮಾಡಲು ಸಿದ್ಧರಿದ್ದಾರೆ.
ನಿತ್ಯ ಪಾಸಿಟಿವ್ ಬರುವ ಸಂಖ್ಯೆಯಲ್ಲಿ ಸ್ಯಾಂಪಲ್ ಜೀನೋಮ್ ಸ್ವೀಕ್ವೆನ್ಸಿಂಗ್ ಮಾಡಲಿದ್ದಾರೆ. ಇದರಿಂದ ಸದ್ಯ ಯಾವ ಕೋವಿಡ್ ವೇರಿಯಂಟ್ ಬಂದಿದೆ ಎಂಬ ನಿಖರ ಮಾಹಿತಿ ಸಿಗಲಿದೆ. ಅಲ್ಲದೇ ನಗರದ ಯಾವ ಪ್ರದೇಶದಲ್ಲಿ ಈ ರೂಪಾಂತರಿ ಕಂಡುಬಂದಿದೆ ಎಂಬ ಬಗ್ಗೆಯೂ ಪತ್ತೆ ಹಚ್ಚಬಹುದು. ಇದರಿಂದ ತ್ವರಿತವಾಗಿ, ಉತ್ತಮವಾಗಿ ಕಂಟೈನ್ಮೆಂಟ್ ಮಾಡಲು, ಐಸೋಲೇಟ್ ಮಾಡಲು ಸಾಧ್ಯ ಎಂದು ತಿಳಿಸಿದರು.
ಇನ್ನು ಡೆಲ್ಟಾ ಪ್ಲಸ್ ವೈರಸ್ ಬಗ್ಗೆ WHOನಲ್ಲಿಯೂ ಅಧ್ಯಯನ ನಡೆಯುತ್ತಿದ್ದು, ಎಷ್ಟು ವೇಗವಾಗಿ ಹರಡಬಹುದು, ಇದರ ಸಾಮರ್ಥ್ಯ ಹೇಗಿದೆ, ವ್ಯಾಕ್ಸಿನ್ಗಳನ್ನು ಬೈಪಾಸ್ ಮಾಡಬಹುದಾದ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದರು.
ನಗರದಲ್ಲಿ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಚುರುಕು
ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಎರಡು ಸಿಸಿಸಿ ಕೇಂದ್ರ198 ವಾರ್ಡ್ಗಳಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಅಗತ್ಯವಿದ್ದು, 57 ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ಸ್ವಂತ ಕಟ್ಟಡ ಇಲ್ಲವಾದಲ್ಲಿ 30 ಸಾವಿರ ಬಾಡಿಗೆ ಕಟ್ಟಡ ಪಡೆಯಲೂ ಅವಕಾಶ ನೀಡಲಾಗಿದೆ. ಅಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ನೂರು ಹಾಸಿಗೆಗಳ ಸ್ಪೆಷಲ್ ಆಸ್ಪತ್ರೆ ಬರಲಿದೆ ಎಂದರು.
ಝೋನಲ್ ವಾರೂಂ, ಸೆಂಟ್ರಲ್ ವಾರ್ ರೂಂಗಳಲ್ಲಿ ಮಾಡುವ ಬೆಡ್ ಬುಕ್ಕಿಂಗ್, ಆ್ಯಂಬುಲೆನ್ಸ್ ವ್ಯವಸ್ಥೆ ,ಇತರ ಕೆಲಸಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ನಡೆಯಲಿದೆ. ನಗರದ ಪ್ರತೀ ಆಸ್ಪತ್ರೆಗಳಲ್ಲಿರುವ ಮಕ್ಕಳ ಹಾಸಿಗೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, 341 ಐಸಿಯು ಮತ್ತು ವೆಂಟಿಲೇಟರ್ ಇದೆ.
700 ಐಸಿಯು ಹಾಸಿಗೆ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ವಾರದಿಂದಲೇ ಕ್ಷೇತ್ರಕ್ಕೆರಡು ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಮಕ್ಕಳಲ್ಲಿ ಕೋವಿಡ್ ಹರಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹೆಚ್ಚಿನ ಮಕ್ಕಳಲ್ಲಿ ಎ ಸಿಂಪ್ಟಮ್ಯಾಟಿಕ್ ಮಾತ್ರ ಬರುತ್ತಿದೆ. ಮಕ್ಕಳ ತಜ್ಞರ ಲಭ್ಯತೆ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.
ನಗರದ ಈ ಏರಿಯಾಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚು: ಬೆಂಗಳೂರಲ್ಲಿ ಇನ್ನೂ ಪಾಸಿಟಿವಿಟಿ ದರ ಕಡಿಮೆಯಾಗಿಲ್ಲ. 198 ವಾರ್ಡ್ಗಳ ಪೈಕಿ 14 ಏರಿಯಗಳು ಇನ್ನೂ ಅಪಾಯದಲ್ಲಿವೆ. 14 ವಾರ್ಡ್ಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 10ಕ್ಕೂ ಹೆಚ್ಚು ಇವೆ.
ಬಿಬಿಎಂಪಿಗೆ ಡೇಂಜರ್ ಆಗಿರುವ ಏರಿಯಾಗಳು ಮತ್ತು ಶೇ.10 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಏರಿಯಾಗಳು:
ಏರಿಯಾ | ಪಾಸಿಟಿವಿಟಿ ದರ( ಶೇಕಡಾವಾರು) |
ನೇತಾಜಿ ಸರ್ಕಲ್ | 19.37 |
ಜಾಲಹಳ್ಳಿ | 16.67 |
ರಾಬರ್ಟ್‌ಸನ್ ಸ್ಟ್ರೀಟ್ | 14.43 |
ಸಂಜಯ್ ನಗರ | 13.08 |
ಎನ್.ಎಸ್.ಪಾಳ್ಯ | 11.43 |
ಡಿಜೆ ಹಳ್ಳಿ | 11.34 |
ವಿದ್ಯಾ ಪೀಠ | 10.91 |
ಶೇ.5ಕ್ಕಿಂತ ಕಡಿಮೆ ಇರುವ ಏರಿಯಾಗಳು: ಕೋಡಿಗೆಹಳ್ಳಿ, ಲಿಂಗರಾಜಪುರ, ಗಂಗಾನಗರ, ಕೆ.ಆರ್.ಪುರಂ, ಮಂಜುನಾಥ ನಗರ, ಹೊಸಹಳ್ಳಿ
ಶೇ. 2ಕ್ಕಿಂತ ಕಡಿಮೆ ಇರುವ ಏರಿಯಾಗಳು: ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ ವಲಯ, ಮಹಾದೇವಪುರ, ಆರ್.ಆರ್.ನಗರ, ದಕ್ಷಿಣ ಮತ್ತು ಯಲಹಂಕ ವಲಯ. ಸದ್ಯ ಪಾಸಿಟಿವಿಟಿ ಹೆಚ್ಚಿರುವ ವಾರ್ಡ್ಗಳ ಸ್ಯಾಂಪಲ್ಗಳನ್ನು ಜೀನೊಮ್ ಸ್ವೀಕ್ವೆನ್ಸಿಂಗ್ ಕಳಿಸಲು ಪಾಲಿಕೆ ಚರ್ಚೆ ನಡೆಸುತ್ತಿದೆ ಎಂದು ರಂದೀಪ್ ಮಾಹಿತಿ ನೀಡಿದ್ದಾರೆ.