ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾದ ಯುವತಿಯ ತಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಈ ವೇಳೆ ಶಾ, ಅವರನ್ನು ಸಭೆಗೆ ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾನು ಅಮಿತ್ ಶಾ ಜೊತೆ ಮಾತನಾಡಿದ್ದು, ಅವರು ನನ್ನನ್ನು ಸಭೆಗೆ ಕರೆದಿದ್ದಾರೆ. ಈ ಬಗ್ಗೆ ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ. ಆದರೆ ಸಭೆ ನಡೆಯಲಿದೆ ಎಂದು ಅವರು ಬುಧವಾರ ತಿಳಿಸಿದರು.
ಸಂತ್ರಸ್ತೆಯ ಪೋಷಕರು ಅಕ್ಟೋಬರ್ 22ರಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಪ್ರಕರಣದಲ್ಲಿ ನಮಗೆ ನ್ಯಾಯ ದೊರಕಿಸಿಕೊಡಲು ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದರು.
ಕೇಂದ್ರ ಬಿಜೆಪಿ ನಾಯಕರು ಕೂಡ ಅಕ್ಟೋಬರ್ 27ರಂದು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅವರೊಂದಿಗೆ ಸಭೆಗೆ ವ್ಯವಸ್ಥೆ ಮಾಡುವ ಭರವಸೆ ಪೋಷಕರಿಗೆ ನೀಡಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಪೋಷಕರು ಭವಿಷ್ಯದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡುವ ಮತ್ತೊಂದು ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು.
ಆರ್ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಆಗಸ್ಟ್ 9ರಂದು ಕರ್ತವ್ಯದ ಸಮಯದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದರು. ಮೃತದೇಹ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಪತ್ತೆಯಾಗಿತ್ತು. ದೇಶದಾದ್ಯಂತ ಆಕ್ರೋಶ, ಖಂಡನೆಗೆ ಗುರಿಯಾದ ಈ ಘಟನೆ ಸಂಬಂಧ ನ್ಯಾಯಕ್ಕಾಗಿ ಆಗ್ರಹಿಸಿ ಕಿರಿಯ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಆರ್ಜಿ ಕರ್ ಅತ್ಯಾಚಾರ, ಕೊಲೆ ಘಟನೆ: ನ್ಯಾಯ ಕೊಡಿಸುವಂತೆ ರಾಷ್ಟ್ರಪತಿ ಮುರ್ಮುಗೆ ವೈದ್ಯರ ಮೊರೆ