ತಮ್ಮ ಬಹುನಿರೀಕ್ಷಿತ 'ಮ್ಯಾಕ್ಸ್' ಸಿನಿಮಾದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಅಭಿನಯ ಚಕ್ರವರ್ತಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಿಚ್ಚನ ಕಡೆಯಿಂದ ಬಂದ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಅಂದ ಹಾಗೆ ಇದು ಕಿಚ್ಚ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಅಲ್ಲ. ಬದಲಾಗಿ ಸುದೀಪ್ ನಿರ್ಮಾಣ ಮಾಡುತ್ತಿರುವ ಚಿತ್ರ.
ಕಿಚ್ಚನ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕೆಆರ್ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ವಿಶೇಷ ಅಂದ್ರೆ ಈ ಸಿನಿಮಾಗೆ ನಾಯಕನಾಗಿ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸುತ್ತಿದ್ದಾರೆ. ಸಂಚಿತ್ ಚೊಚ್ಚಲ ಚಿತ್ರಕ್ಕೆ ಕಿಚ್ಚ ಬಂಡವಾಳ ಹೂಡುತ್ತಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಸಿನಿಮಾ ಹೇಗೆ ಮೂಡಿಬರಬಹುದು ಅನ್ನೋ ಕುತೂಹಲ ಅಪಾರ ಸಂಖ್ಯೆಯ ಅಭಿಮಾನಿಗಳದ್ದು.
ಇನ್ನೂ ಎಕ್ಕ ಸಿನಿಮಾದ ಬಳಿಕ ಕೆಆರ್ಜಿ ಸ್ಟುಡಿಯೋಸ್ ಈ ಸಿನಿಮಾ ಅನೌನ್ಸ್ ಮಾಡಿದೆ. ಕೆಆರ್ಜಿ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿದ್ದು, ಭರವಸೆಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸುದೀಪ್ ಸಹೋದರಿಯ ಪುತ್ರನ ಸಿನಿಮಾ ಆಗಿರೋದ್ರಿಂದ ಈ ಪ್ರಾಜೆಕ್ಟ್ ಮೇಲೆ ಕುತೂಹಲ, ನಿರೀಕ್ಷೆಗಳು ಹೆಚ್ಚಾಗಿದೆ. ಸಂಚಿತ್ ಮೊದಲ ಸಿನಿಮಾಗೆ ವಿವೇಕ ಅವರು ನಿರ್ದೇಶನದ ಹೊಣೆಗಾರಿಕೆ ಹೊತ್ತಿದ್ದಾರೆ. ಇದು ನಿರ್ದೇಶಕರಿಗೂ ಚೊಚ್ಚಲ ಚಿತ್ರ. ಯುವ ಪ್ರತಿಭೆಗಳಿಗೆ ಅಭಿನಯ ಚಕ್ರವರ್ತಿ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಗಣೇಶ್ ಸಿನಿಮಾ ಟೈಟಲ್ ಟೀಸರ್ ಅನಾವರಣಕ್ಕೆ ದಿನ ನಿಗದಿ: ಪವರ್ಫುಲ್ ಪಾತ್ರದಲ್ಲಿ ಗೋಲ್ಡನ್ ಸ್ಟಾರ್
ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋ ವಿವೇಕ ಅವರೀಗ ಸ್ವತಂತ್ರ್ಯ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೈಸೂರು ಮೂಲದ ವಿವೇಕ ಅವರು ಸಂಚಿತ್ ಅವರನ್ನು ವಿಭಿನ್ನವಾಗಿ ತೆರೆ ಮೇಲೆ ತೋರಿಸೋ ಪ್ರಯತ್ನ ಮಾಡ್ತಿದ್ದಾರೆ. ಪ್ರಿಯಾ ಸುದೀಪ್, ಕಾರ್ತಿಕ್, ಯೋಗಿ ಜಿ ರಾಜ್ ಸೇರಿ ಈ ಬಹುನಿರೀಕ್ಷಿತ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಅಮ್ಮನ ನೆನಪು, ನಾನಿನ್ನೂ ಸಿನಿಮಾವನ್ನು ಸಂಪೂರ್ಣ ವೀಕ್ಷಿಸಿಲ್ಲ': ಮ್ಯಾಕ್ಸ್ ನಾಯಕ ಸುದೀಪ್
ಇದೊಂದು ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಜನವರಿ 24ರಂದು ಅದ್ದೂರಿಯಾಗಿ ಲಾಂಚ್ ಆಗಲಿದೆ. ಮುಹೂರ್ತದ ಬಳಿಕ ಶೂಟಿಂಗ್ ಕೂಡಾ ಅಂದಿನಿಂದಲೇ ಪ್ರಾರಂಭ ಆಗಲಿದೆ. ಉಳಿದಂತೆ ಈ ಸಿನಿಮಾದ ನಾಯಕಿ ಯಾರು? ತಂತ್ರಜ್ಞರು ಯಾರು? ಎನ್ನುವ ಅನೇಕ ಪ್ರಶ್ನೆಗಳಿಗೆ ಮುಹೂರ್ತದ ದಿನವೇ ಉತ್ತರ ಸಿಗಲಿದೆ.