ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಮೊಮ್ಮಗ ಸಮರ್ಥ್ ವಿಜಯ್ ನಿರಾಣಿ 3 ವರ್ಷ 10 ತಿಂಗಳಲ್ಲೇ ಗಾಲ್ಫ್ ಕಾರ್ಟ್ ಓಡಿಸಿ ದಾಖಲೆ ಬರೆದಿದ್ದಾನೆ. ಬಾಲಕನ ಪ್ರತಿಭೆ ಗಮನಿಸಿದ ಮುರುಗೇಶ್ ನಿರಾಣಿಯವರ ಮಗ ವಿಜಯ್ ಹಾಗೂ ಅವರ ಪತ್ನಿ ಸುಶ್ಮಿತಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ವೀಡಿಯೊ ಕಳುಹಿಸಿದ್ದರು.
ಈ ದಾಖಲೆ ಸಂಸ್ಥೆಗಳ ತೀರ್ಪುಗಾರರು ಮುಧೋಳ ನಗರಕ್ಕೆ ಬಂದು ಪರೀಕ್ಷೆ ಮಾಡಿದ್ದಾರೆ. ಬಾಲಕನ ಚಾಲನೆ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ದಾಖಲೆ ಪ್ರಶಸ್ತಿ, ಪದಕ ನೀಡಿ ಗೌರವಿಸಿದ್ದಾರೆ.
"ಸಮರ್ಥನಿಗೆ ಇದು 2ನೇ ಅವಾರ್ಡ್. ಅವನು ಮಾತನಾಡಲು ಶುರು ಮಾಡಿದಾಗಿನಿಂದ ಮನೆಯಲ್ಲಿ ಅಜ್ಜಿ ಶ್ಲೋಕ ಹೇಳಿಕೊಡುತ್ತಿದ್ದರು. ಹೀಗಾಗಿ 2 ವರ್ಷ 10 ತಿಂಗಳಿದ್ದಾಗ ಅತೀ ಹೆಚ್ಚು ಶ್ಲೋಕ ಹೇಳಿರುವುದಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಪ್ರಶಸ್ತಿ ಬಂದಿತ್ತು. ಇದೀಗ ಗಾಲ್ಫ್ ಕಾರ್ಟ್ ಓಡಿಸಿರುವುದಕ್ಕೆ ಎರಡನೇ ಅವಾರ್ಡ್ ಬಂದಿದೆ" ಎಂದು ತಾಯಿ ಸುಷ್ಮಿತಾ ಖುಷಿ ಹಂಚಿಕೊಂಡರು.
"ಸಣ್ಣವನಿದ್ದಾಗಿನಿಂದಲೂ ಬೈಕ್, ಕಾರುಗಳ ಮೇಲೆ ಅವನಿಗೆ ಬಹಳ ಆಸಕ್ತಿ ಇತ್ತು. ಮನೆಯ ಒಳಗಡೆ ಸೋಪಾ, ಟೇಬಲ್ಗಳಿಗೆ ತಾಗದಂತೆ ತಿರುವು ತೆಗೆದುಕೊಂಡು ಬಹಳ ಚೆನ್ನಾಗಿ ಆಟಿಕೆ ಕಾರು ಓಡಿಸುತ್ತಿದ್ದ. ಆತನಿಗೆ ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದಾಗ ಕಾರು, ಬೈಕ್ ಬೇಕು. ಒಮ್ಮೆ ಶಾಲೆಗೆ ಹೋಗಬೇಕಾದರೆ ಚಾಲಕನ ಕಾಲ ಮೇಲೆ ಕುಳಿತುಕೊಂಡು ಅವನೇ ಕಾರು ಚಾಲನೆ ಮಾಡುತ್ತಿದ್ದ. ಹೀಗೆ ಒಂದು ದಿನ ಗಾಲ್ಫ್ ಕಾರ್ಟ್ನಲ್ಲೂ ಕುಳಿತುಕೊಂಡಾಗ ಅವನೊಬ್ಬನೇ ಡ್ರೈವ್ ಮಾಡಬೇಕೆಂಬ ಆಸೆ ಇತ್ತು. ಆಗ ಅವನಿಗೆ 3 ವರ್ಷ 10 ತಿಂಗಳಾಗಿತ್ತು" ಎಂದು ಅವರು ಹೇಳಿದರು.
"ಸರಿಯಾಗಿ ಬ್ರೇಕ್ ಹಾಕಲು ಕಾಲು ತಲುಪುತ್ತಿರಲಿಲ್ಲ. ಆಗ ನೀನು ಹೇಗೆ ಓಡಿಸುತ್ತಿಯಾ? ಅಂದಾಗ, " ನೋಡು ಮಮ್ಮಿ ನಾನು ನಿಂತುಕೊಂಡು ಓಡಿಸುತ್ತೇನೆ" ಎಂದು ನಿಂತುಕೊಂಡೇ ಎಕ್ಸ್ಲೇಟರ್ ಅನ್ನು ಟಚ್ ಮಾಡಿ ನನಗೆ ಸಿಗುತ್ತದೆ ಎಂದು ತೋರಿಸಿದ. ಅವನಿಗೆ ಆತ್ಮವಿಶ್ವಾಸವಿದ್ದಾಗ ಅದಕ್ಕೆ ಕಡಿವಾಣ ಹಾಕುವುದು ಬೇಡ ಎಂದು ಹ್ಯಾಂಡ್ ಬ್ರೇಕ್ ಹಾಕಿ ಅನುಮತಿ ಕೊಟ್ಟೆ. ನಿಧಾನವಾಗಿ ನಮ್ಮನೆ ಕಾಂಪೌಂಡ್ ಒಳಗೆ ಓಡಿಸಿದ್ದಾನೆ. ಅದನ್ನು ನೋಡಿದ ಮೇಲೆ ಮನೆಯವರನ್ನೆಲ್ಲರನ್ನೂ ಕರೆದು ಅವನ ತಾತ, ಅಜ್ಜಿಯನ್ನು ಕರೆದುಕೊಂಡು ಫ್ಯಾಕ್ಟರಿಯಲ್ಲಿ ಒಂದು ರೌಂಡ್ ಹಾಕಿದ್ದಾನೆ. ಎಲ್ಲರೂ ಖುಷಿ ಪಟ್ಟರು" ಎಂದು ವಿವರಿಸಿದರು.
"ಅದಾಗಿ 2-3 ತಿಂಗಳಲ್ಲಿ ಗಿನ್ನಿಸ್, ಲಿಮ್ಕಾ, ಏಷ್ಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಅರ್ಜಿ ಹಾಕಿದೆವು. ಎಲ್ಲದರಲ್ಲೂ ಆಯ್ಕೆಯಾದ. ಸದ್ಯ ಇಂಡಿಯಾ ಹಾಗೂ ಏಷ್ಯಾ ರೆಕಾರ್ಡ್ ಸಂಸ್ಥೆಯಿಂದ ಪ್ರಶಸ್ತಿಗಳು ಬಂದಿವೆ. ಇನ್ನು ಗಿನ್ನಿಸ್ ಕ್ಯಾಟಗರಿ, ಲಿಮ್ಕಾದಲ್ಲೂ ಆಯ್ಕೆಯಾಗಿದ್ದು ಅದೂ ಮುಂದಿನ ತಿಂಗಳು ಬರಲಿದೆ" ಎಂದು ಸುಶ್ಮಿತಾ ಹೇಳಿದ್ದಾರೆ.
ಇದನ್ನೂ ಓದಿ: 'ರೂಬಿಕ್ ಕ್ಯೂಬಿಕ್ ಮೊಸಾಯಿಕ್' ಗೇಮ್ನಲ್ಲಿ ಗಿನ್ನಿಸ್ ದಾಖಲೆ ಸೇರಿದ ದಾವಣಗೆರೆ ವಿದ್ಯಾರ್ಥಿ