ಬೆಂಗಳೂರು: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಿಂದ ಸಮರ್ಥ ದೇಶ ನಿರ್ಮಾಣ ಸಾಧ್ಯ. ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹೆಚ್.ಎಂ.ಟಿ ಮೈದಾನದಲ್ಲಿ ಇಂದು ಆಯೋಜಿಸಿದ್ದ ಹೆಬ್ಬಾಳ ಚಿಣ್ಣರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಈ ಕನ್ನಡ ಹಬ್ಬವನ್ನು ಜೆಡಿಎಸ್ ಅಭ್ಯರ್ಥಿ ಡಾ.ಸೈಯದ್ ಅಲ್ತಾಫ್ ಅತ್ಯುತ್ತಮವಾಗಿ ಆಯೋಜಿಸಿದ್ದಾರೆ. 35 ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಾರೆ.
ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಮಕ್ಕಳು ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಬೇಕು. ಅವರ ಸರ್ವತೋಮುಖ ಅಭಿವೃದ್ದಿಯಿಂದ ಸಮರ್ಥ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಐಟಿ ಬಿಟಿಗಳಲ್ಲಿ ಹೊರ ರಾಜ್ಯದವರಿಗೆ ಸಿಗುವ ಮಾನ್ಯತೆ ಕನ್ನಡಿಗರಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಯುವಕರಿಗೆ ಅದರಲ್ಲೂ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ದೊರೆಯಬೇಕು. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಬೇಕು. ಕನ್ನಡಿಗರ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ. ಒಂದು ಬಾರಿ ಕುಮಾರಣ್ಣನಿಗೆ ಐದು ವರ್ಷ ಕಾಲ ಅಧಿಕಾರ ಕೊಟ್ಟು ನೋಡಿ, ನಿರುದ್ಯೋಗ ಸಮಸ್ಯೆ ದೂರಮಾಡುವುದು ಖಂಡಿತ. ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವಂತಹ ನಾಯಕತ್ವದ ಕೊರತೆಯನ್ನು ನಾವು ನೀಗಿಸುತ್ತೇವೆ ಎಂದು ಹೇಳಿದರು.
ಬಳಿಕ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸೈಯದ್ ಮೋಹಿದ್ ಅಲ್ತಾಫ್ ಮಾತನಾಡಿ, ರಾಜಧಾನಿಯಲ್ಲಿ ಕನ್ನಡ ಮಾಯವಾಗುತ್ತಿದೆ ಅನ್ನೋ ಕೊರಗಿನ ಮಧ್ಯೆ ಈ ಕನ್ನಡ ಹಬ್ಬ ಹೊಸ ಆಶಾಕಿರಣವಾಗಲಿದೆ. ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಮೂಡಿಸಲು ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದೇವೆ.
ನಮ್ಮ ನಾಯಕರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂದೇಶದಂತೆ ಕನ್ನಡ ನೆಲ, ಕನ್ನಡ ಭಾಷೆಯನ್ನು ಬೆಳಸುವುದೇ ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್ನ ಪ್ರಥಮ ಆದ್ಯತೆ. ಹಾಗಾಗಿ ನಾವು ಈ ವಿಶಿಷ್ಟ ಕನ್ನಡ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಮಕ್ಕಳಿಗೆ ಸಮೂಹ ನೃತ್ಯ ಸ್ಪರ್ಧೆ ಹಾಗೂ ಮಾದರಿ ರಚನಾ ಸ್ಪರ್ಧೆಯನ್ನು ಆಯೋಜಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಿಖಿಲ್ ಕುಮಾರಸ್ವಾಮಿ ಅವರು ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಪ್ರೋತ್ಸಾಹಿಸಿದರು. ಹಾಗೇ ಈ ಸಂದರ್ಭದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ವಿವಿಧ ಶಾಲೆಗಳ ಕನ್ನಡದ 28ಕ್ಕೂ ಹೆಚ್ಚು ಉಪಾಧ್ಯಾಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಆರೋಗ್ಯ ಸೌಧದಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಮಕ್ಕಳ ಪಾಲನೆಗೆ ಡೇ ಕೇರ್ ಸೆಂಟರ್