ಬೆಂಗಳೂರು: ''ನಮಗೆ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆದರ್ಶ. ಅವರು ಈ ವಯಸ್ಸಿನಲ್ಲೂ ಮಾರ್ಗದರ್ಶನ ಮಾಡುತ್ತಿರುವುದು ನಿಜಕ್ಕೂ ದೊಡ್ಡ ವಿಷಯ. ದೇವೇಗೌಡರಿಂದ ನಾವು ಕಲಿಯುವುದು ಬಹಳಷ್ಟಿದೆ'' ಎಂದು ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
15ನೇ ವಿಧಾನಸಭೆಯ ಕೊನೆ ದಿನವಾದ ಇಂದು ಬಿಎಸ್ವೈ ವಿದಾಯ ಭಾಷಣ ಮಾಡಿದರು. ''ಇಂತಹ ಇಳಿವಯಸ್ಸಿನಲ್ಲೂ ನಾಡಿನ ಜಲ, ನೆಲ, ಭಾಷೆ, ರೈತರ ಬಗ್ಗೆ ಚಿಂತನೆ ನಡೆಸುವ ದೇವೇಗೌಡರು ನಮ್ಮೆಲ್ಲರಿಗೂ ಆದರ್ಶಪ್ರಾಯ" ಎಂದ ಅವರು, ''ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಲಾಭವಾಗಿದೆ'' ಎಂದರು.
ಗೆದ್ದು ಬಂದು ಮಂತ್ರಿಯಾಗಿ: ''ಸಭಾಧ್ಯಕ್ಷರಾಗಿ ನೀವು (ವಿಶ್ವೇಶ್ವರ ಹೆಗಡೆ ಕಾಗೇರಿ) ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಒಳ್ಳೆಯ ರೀತಿಯಲ್ಲಿ ಕಲಾಪಗಳನ್ನು ಮುನ್ನಡೆಸಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗಿ, ನಿಮ್ಮ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆಯಿರಿ'' ಎಂದು ಹೇಳಿದರು.
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆ, ಟಿಪ್ಪಣಿಗಳು ಸರ್ವೇ ಸಾಮಾನ್ಯ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ಸಚಿವರು, ಶಾಸಕರು ಉತ್ತಮ ಬೆಂಬಲ ಕೊಟ್ಟಿದ್ದಾರೆ. ಅನೇಕ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ'' ಎಂದು ಪ್ರಶಂಸಿಸಿದರು.
ನಾನು ಬೆಳೆಯಲು RSS ಕಾರಣ: ''ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ಆರ್ಎಸ್ಎಸ್ ತರಬೇತಿ. ಅದರಿಂದಾಗಿ ಇಷ್ಟೆಲ್ಲ ಸ್ಥಾನಮಾನಗಳು ಸಿಕ್ಕಿವೆ. ಇದನ್ನು ಮರೆಯಲು ಸಾಧ್ಯವಿಲ್ಲ'' ಎಂದರು.
"ಇದೇ ತಿಂಗಳ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ನನ್ನ ಜನ್ಮದಿನದಂದು ಅಂದ್ರೆ, ಫೆ. 27ರಂದು ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ ಹಾಗೂ ತೃಪ್ತಿ ತಂದಿದೆ'' ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ತರುವ ಗುರಿ: ''ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ, ನನ್ನ ಕೊನೆಯುಸಿರು ಇರುವವರೆಗೂ ಜನಸೇವೆ ಮಾಡುತ್ತೇನೆ. ಬಿಜೆಪಿಯನ್ನು ಬಲಪಡಿಸಿ, ಮತ್ತೆ ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಗುರಿ'' ಎಂದು ಬಿಎಸ್ವೈ ಹೇಳಿದರು.
''ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಶಿಕಾರಿಪುರದ ಪುರಸಭಾ ಸದಸ್ಯನಾಗಿ ಮುಖ್ಯಮಂತ್ರಿ ಹುದ್ದೆವರೆಗೂ ಬಂದಿದ್ದೇನೆ" ಎಂದು ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು. ಶಿಕಾರಿಪುರದ ಜನರಿಗೆ ನಾನು ಚಿರಋಣಿ. ಅವರ ಆಶೀರ್ವಾದದಿಂದಲೇ ನನಗೆ ಎಲ್ಲವೂ ಸಿಕ್ಕಿದೆ. ಜನರ ಋಣ ತೀರಿಸುವ ಕೆಲಸ ಮುಂದುವರೆಸುತ್ತೇನೆ."
ರಾಜ್ಯದಲ್ಲಿ ಸರಿಯಾದ ರಸ್ತೆಗಳು ಇಲ್ಲದೇ ಇರುವ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ ಜೋಷಿ ಅವರಂತಹ ಹಿರಿಯರ ಜೊತೆ ಸೇರಿ ಪಕ್ಷ ಕಟ್ಟಿದ್ದೇನೆ. ಆಗ ಪಕ್ಷದಲ್ಲಿ ಯಾರೂ ಇರಲಿಲ್ಲ. ವಿಧಾನಸಭೆಗೆ ಬಿಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ರೈತರ ಪರವಾಗಿ ಹೋರಾಟ ಮಾಡಿದ ಕ್ಷಣಗಳು, ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸಲು ಮಾಡಿದ ಹೋರಾಟ ಹಾಗೂ ಕಷ್ಟದಲ್ಲಿ ಪಕ್ಷ ಕಟ್ಟಿದ್ದನ್ನು ಯಡಿಯೂರಪ್ಪ ನೆನಪಿಸಿಕೊಂಡರು. ಇದೇ ವೇಳೆ ಸದನಕ್ಕೆ ಹೆಚ್ಚು ಮಹಿಳೆಯರು ಆಯ್ಕೆಯಾಗಿ ಬರಬೇಕಾದ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.
ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ನಂತರ ಯಡಿಯೂರಪ್ಪ ಹಲವು ಶಾಸಕರ ಜೊತೆ ಸೇರಿ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಪುತ್ಥಳಿಗಳಿಗೆ ಪುಷ್ಪ ನಮನ ಸಲ್ಲಿಸಿ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದರು.
ಇದನ್ನೂ ಓದಿ: ಬಿಎಸ್ವೈ ಭಾಷಣಕ್ಕೆ ಮೋದಿ ಫಿದಾ: ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ
ಈ ವೇಳೆ ಮಾತನಾಡಿದ ಯಡಿಯೂರಪ್ಪ, ವಿಧಾನ ಮಂಡಲ ಅಧಿವೇಶನ ಇಂದು ಮುಗಿದಿದೆ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಾತ್ಮಾ ಗಾಂಧಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ್ದೇನೆ. ಮುಂದೆ ಚುನಾವಣೆಗೆ ನಾನು ನಿಲ್ಲಲ್ಲ. ಆದರೆ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ 140ಕ್ಕೂ ಅಧಿಕ ಕ್ಷೇತ್ರ ಗೆಲ್ಲಿಸಿ ಕೇಂದ್ರದ ನಾಯಕರಾದ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಕೊಡುಗೆ ನೀಡುತ್ತೇನೆ. ಫೆ.27 ರಂದು ನನ್ನ ಜನ್ಮದಿನ. ಅಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರ್ತಾರೆ. ವಿಮಾನ ನಿಲ್ದಾಣ ಉದ್ಘಾಟನೆ ಮಾಡ್ತಾರೆ. ಎಲ್ಲರೂ ಬನ್ನಿ ಎಂದು ಇದೇ ವೇಳೆ ಮನವಿ ಮಾಡಿದರು.
ಸಿಎಂ ಬೊಮ್ಮಾಯಿ ಅನುಪಸ್ಥಿತಿ: ಮಾಜಿ ಸಿಎಂ ಯಡಿಯೂರಪ್ಪ ವಿಧಾನಸೌಧ ಆವರಣದಲ್ಲಿ ಅಂಬೇಡ್ಕರ್ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಟ ನಮನ ಸಲ್ಲಿಸುವ ಸಂದರ್ಭ ಸಿಎಂ ಬೊಮ್ಮಾಯಿ ಅನುಪಸ್ಥಿತಿ ಎದ್ದು ಕಂಡಿತು. ತಮ್ಮ ರಾಜಕೀಯ ಗುರು ಯಡಿಯೂರಪ್ಪರ ಕೊನೆ ಅಧಿವೇಶನದ ವಿದಾಯದ ವೇಳೆ ಬೊಮ್ಮಾಯಿ ಗೈರು ಅಚ್ಚರಿ ಮೂಡಿಸಿತು. ಸಚಿವರಾದ ಬಿ.ಸಿ.ನಾಗೇಶ್, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಆರಗ ಜ್ಞಾನೇಂದ್ರ, ಭೈರತಿ ಬಸವರಾಜ್ ಅವರು ಯಡಿಯೂರಪ್ಪಗೆ ಸಾತ್ ನೀಡಿದ್ದರು. ಅಧಿವೇಶನ ಮುಗಿಯುತ್ತಿದ್ದ ಹಾಗೇ ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪ ಅವರಿಗೆ ಸಾತ್ ನೀಡದೇ, ನೇರವಾಗಿ ಸಿಸಿಎಲ್ ಕ್ರಿಕೆಟ್ ಟೂರ್ನಿಗೆ ತೆರಳಿರುವುದು ಹತ್ತಾರು ಪ್ರಶ್ನೆಗಳನ್ನುಂಟು ಮಾಡಿದೆ.