ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷವು ಆಮ್ ಆದ್ಮಿ ಪಾರ್ಟಿ ಮತ್ತು ಅದರ ನಾಯಕರ ವಿರುದ್ಧ ಕೆಟ್ಟ ಪಿತೂರಿ ನಡೆಸುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬುಧವಾರ ಆರೋಪಿಸಿದರು.
'ಸಂಜೀವಿನಿ ಯೋಜನೆ' ಮತ್ತು 'ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ'ಗಳು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಸಾರ್ವಜನಿಕವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕೇಜ್ರಿವಾಲ್ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅತಿಶಿ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ಅವರೊಂದಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಅತಿಶಿ ವಿರುದ್ಧ ಬಿಜೆಪಿ ಸುಳ್ಳು ಪ್ರಕರಣಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
"ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಸೋಲು ಕಾಣಲಿದೆ. ಅವರ ಬಳಿ ಯಾವುದೇ ಕಾರ್ಯಸೂಚಿ ಇಲ್ಲ ಮತ್ತು ಕಳೆದ ಹತ್ತು ವರ್ಷಗಳಿಂದ ಯಾವುದೇ ಕೆಲಸವನ್ನೂ ಮಾಡಿಲ್ಲ. ಸಂಸದರು, ಲೆಫ್ಟಿನೆಂಟ್ ಗವರ್ನರ್ ಮತ್ತು ಸಂಪನ್ಮೂಲಗಳನ್ನು ಹೊಂದಿದ್ದರೂ ಅವರು ಭದ್ರತೆ, ಶಿಕ್ಷಣ, ಮೂಲಸೌಕರ್ಯ ಅಥವಾ ಆರೋಗ್ಯ ಸೌಲಭ್ಯಗಳನ್ನು ಜನತೆಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು.
ಬಿಜೆಪಿಯ ಬಳಿ ಈಗ ಮುಖ್ಯಮಂತ್ರಿ ಅಭ್ಯರ್ಥಿಯೂ ಇಲ್ಲವಾಗಿದ್ದು, ನಕಾರಾತ್ಮಕ ಪ್ರಚಾರವನ್ನು ಮಾತ್ರ ಅದು ಅವಲಂಬಿಸಿದೆ ಎಂದು ಆರೋಪಿಸಿದರು.
ಶಾಲೆ, ಆಸ್ಪತ್ರೆಗಳು, ಮೊಹಲ್ಲಾ ಕ್ಲಿನಿಕ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಉಚಿತ ವಿದ್ಯುತ್ ಮುಂತಾದ ಸಾಧನೆಗಳ ಆಧಾರದ ಮೇಲೆ ಎಎಪಿ ಮತ ಕೇಳುತ್ತಿದ್ದರೆ, ಬಿಜೆಪಿ ಅವಹೇಳನಕಾರಿ ಹೇಳಿಕೆ ಮತ್ತು ಆಧಾರರಹಿತ ಆರೋಪಗಳಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಅವರು ಹೇಳಿದರು.
ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿ ಯೋಜನೆ ಸೇರಿದಂತೆ ಎಎಪಿಯ ಕಲ್ಯಾಣ ಯೋಜನೆಗಳು ನೈಜವಾಗಿವೆ ಮತ್ತು ಅವುಗಳನ್ನು ದೆಹಲಿ ಕ್ಯಾಬಿನೆಟ್ ಅನುಮೋದಿಸಿದೆ ಎಂದು ಕೇಜ್ರಿವಾಲ್ ಒತ್ತಿ ಹೇಳಿದರು.
"ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವ ಯೋಜನೆಯನ್ನು ಕ್ಯಾಬಿನೆಟ್ ಅನುಮೋದಿಸಿದೆ ಮತ್ತು ಚುನಾವಣೆಯಲ್ಲಿ ಗೆದ್ದ ನಂತರ ಅದನ್ನು 2,100 ರೂ.ಗೆ ಹೆಚ್ಚಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಹಿರಿಯ ನಾಗರಿಕರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಭರವಸೆ ನೀಡಿದ್ದೇವೆ" ಎಂದು ಅವರು ಹೇಳಿದರು.
ಎಎಪಿಯ ಈ ಯೋಜನೆಗಳಿಂದ ಬಿಜೆಪಿಗೆ ಭಯ ಶುರುವಾಗಿದೆ ಮತ್ತು ಇದೇ ಕಾರಣಕ್ಕೆ ಅದು ಎಎಪಿ ನಾಯಕರ ವಿರುದ್ಧ ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು. "ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳು ಸಭೆ ನಡೆಸಿದ್ದು, ಯಾವುದಾದರೂ ಸುಳ್ಳು ಪ್ರಕರಣ ದಾಖಲಿಸಿ ಸಿಎಂ ಅತಿಶಿ ಅವರನ್ನು ಬಂಧಿಸಲು ಪಿತೂರಿ ನಡೆಸಲಾಗಿದೆ" ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದರು.