ಬೆಂಗಳೂರು: "ಬಿಜೆಪಿ ಕರ್ನಾಟಕದಲ್ಲಿ ಸುಭದ್ರವಾಗಿ ಬೆಳೆದು ನಿಲ್ಲಲು ಯಡಿಯೂರಪ್ಪ, ಅನಂತ ಕುಮಾರ್ ಆದಿಯಾಗಿ ಹಿರಿಯರ ತಪಸ್ಸು ಕಾರಣ. ತನು, ಮನ, ಧನ ಅರ್ಪಿಸಿದ ಲಕ್ಷಾಂತರ ಕಾರ್ಯಕರ್ತರ ಅವಿರತ ಶ್ರಮ ಇದರ ಹಿಂದಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ಸ್ಮರಣಾರ್ಥ ಹಾಗೂ 'ಸುಶಾಸನ ದಿನ'ದ ನಿಮಿತ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಹಮ್ಮಿಕೊಂಡಿದ್ದ ಪ್ರದರ್ಶಿನಿ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಬಿಜೆಪಿಯ ಕಟ್ಟಡ ನಮಗೆ ಕಾಣುತ್ತಿದೆ. ಪಕ್ಷ ಬೆಳೆದು ನಿಂತಿರುವುದು ಗೋಚರಿಸುತ್ತಿದೆ. ಆದರೆ, ಅದರ ಅಡಿಪಾಯ ನಮ್ಮ ಕಣ್ಣಿಗೆ ಕಾಣಲು ಅಸಾಧ್ಯ" ಎಂದು ಅವರು ಹೇಳಿದರು.
"ಅಟಲ್‍ಜೀ, ಅಡ್ವಾಣಿಜೀ, ಮೋದಿಜೀ, ಅಮಿತ್ ಶಾ ಜೀ, ನಡ್ಡಾಜೀ ಅವರನ್ನು ನಾವು ನೆನಪಿಸಿಕೊಳ್ಳಬೇಕು. ಬೂತ್ ಮಟ್ಟದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ಪ್ರಧಾನಿಯಾಗುವ ಹಂತಕ್ಕೆ ಬೆಳೆದು ನಿಲ್ಲುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಆಶಯದಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ದೇಶಾದ್ಯಂತ ಮತ್ತು ರಾಜ್ಯದ ಎಲ್ಲ ಬೂತ್‍ಗಳಲ್ಲೂ ಆಚರಿಸಲಾಗುತ್ತಿದೆ" ಎಂದರು.
"ಹಿಂದೆ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ವಿಪಕ್ಷ ನಾಯಕರಾಗಿದ್ದರು. ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರ ಅಧಿಕೃತ ನಿವಾಸಕ್ಕೆ ಹಲವಾರು ಬಾರಿ ವಾಜಪೇಯಿ ಅವರು ಬಂದಿದ್ದರು. ವಾಜಪೇಯಿ ಅವರು ಶಾಸಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶಿಕಾರಿಪುರಕ್ಕೆ ಭೇಟಿ ಕೊಟ್ಟಿದ್ದರು. 1999ರಲ್ಲಿ ಜೆ.ಎಚ್.ಪಟೇಲರ ಸರ್ಕಾರದ ವಿರುದ್ಧ ಜನಾಂದೋಲನ ನಡೆದಿತ್ತು" ಎಂದು ನೆನೆದರು.
"ಯಡಿಯೂರಪ್ಪ, ಅನಂತಕುಮಾರ್, ರಾಮಚಂದ್ರ ಗೌಡ, ಶಂಕರಮೂರ್ತಿ ಮೊದಲಾದವರ ನೇತೃತ್ವದಲ್ಲಿ ಜನಾಂದೋಲನ ನಡೆದಿತ್ತು. ಹುಬ್ಬಳ್ಳಿ ಸಮಾವೇಶದಲ್ಲಿ 1.5 ಲಕ್ಷದಿಂದ 2 ಲಕ್ಷದಷ್ಟು ಜನಸ್ತೋಮ ಸೇರಿತ್ತು. ವಾಜಪೇಯಿ ಅವರಿಗೆ ಇಷ್ಟು ದೊಡ್ಡ ಸಮಾವೇಶ ಎಂಬುದು ನಂಬಲಾಗದ ಮಾತಾಗಿತ್ತು. ಭಾಷಣ ಮುಗಿಸಿ ಹೆಲಿಕಾಪ್ಟರ್ ಏರುವ ಮೊದಲು ಯಡಿಯೂರಪ್ಪ ಅವರನ್ನು ಬಾಚಿ ಅಪ್ಪಿಕೊಂಡಿದ್ದರು. ವಾಜಪೇಯಿ ಎಂದರೆ ಒಂದು ರೀತಿ ರೋಮಾಂಚನ ಆಗುತ್ತದೆ. ಅವರೊಬ್ಬ ಶ್ರೇಷ್ಠ ನಾಯಕ" ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ರಾಮಚಂದ್ರ ಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ: ಮೂವರು ಕಿಡಿಗೇಡಿಗಳ ಬಂಧನ