ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅಪರಿಚಿತರು ಮೊಟ್ಟೆ ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇಂದು ಲಕ್ಷ್ಮೀ ದೇವಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಗಿಸಿ ಕಾರ್ಯಕರ್ತರೊಂದಿಗೆ ಹೊರಬರುವಾಗ ಅಪರಿಚಿತರು ಮೊಟ್ಟೆ ಎಸೆದಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಮುನಿರತ್ನ ಅವರನ್ನು ರಕ್ಷಣೆ ಮಾಡಿದ್ದಾರೆ. ಈ ಕೃತ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮುನಿರತ್ನ "ಇಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ ಕಾರ್ಯಕ್ರಮಕ್ಕಾಗಿ ಬಂದಿದ್ದೆ. ಅದನ್ನು ಮುಗಿಸಿ ಹೋಗುವಾಗ ದುಷ್ಕರ್ಮಿಗಳು ನನ್ನ ಮೇಲೆ ಮೊಟ್ಟೆ ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ಗುಪ್ತಚರ ವರದಿ ಪ್ರಕಾರ ನಿಮ್ಮ ಮೇಲೆ ಕೊಲೆಯತ್ನ ದಾಳಿ ನಡೆಯಲಿದೆ. ಹೀಗಾಗಿ ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಸೂಚಿಸಿದ್ದರು. ಪೊಲೀಸರ ನಿರ್ದೇಶನದಂತೆ ಹೊರಬರುವಾಗ ಈ ಘಟನೆ ಸಂಭವಿಸಿದೆ" ಎಂದು ಹೇಳಿದರು.
"ಮೂರು ತಿಂಗಳ ಹಿಂದೆ ವಕೀಲರ ರೂಪದಲ್ಲಿ ಬಂದ ಅಪರಿಚಿತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ನನ್ನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಎನ್ಐಎಗೆ ದೂರು ನೀಡಿದ್ದೇನೆ. ನನ್ನನ್ನ ಹತ್ಯೆ ಮಾಡಲು ಸಂಚು ರೂಪಿಸಿರುವುದು ಗೊತ್ತಾಗಿದೆ" ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಮುನಿರತ್ನ ಮೇಲೆ ಯಾರು ಮೊಟ್ಟೆ ಎಸೆದಿದ್ದಾರೋ ಗೊತ್ತಿಲ್ಲ. ಇಬ್ಬರು ಮೊಟ್ಟೆ ಎಸೆದಿದ್ದಾರೆ ಅಂತಾ ಗೊತ್ತಿದೆ. ಪಾರ್ಟಿಗೆ ಸೇರಿದವರಾ ಅಥವಾ ಬೇರೆಯವರಾ ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ಹೇಳಿದರು.
ಗೃಹ ಸಚಿವರ ಪ್ರತಿಕ್ರಿಯೆ: ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ತನ್ನ ವಿರುದ್ಧದ ಆರೋಪ ತಳ್ಳಿಹಾಕಿದ ಡಿ.ಕೆ.ಸುರೇಶ್: ಮೊಟ್ಟೆ ಎಸೆತ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್, ಮುನಿರತ್ನ ಅವರೇ ತಮ್ಮ ಬೆಂಬಲಿಗರ ಮೂಲಕ ಹೀಗೆ ಮಾಡಿ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ" ಎಂದರು.
ಕುಸುಮಾ ಅವರನ್ನು ರಾಜರಾಜೇಶ್ವರಿನಗರದ ಶಾಸಕಿಯನ್ನಾಗಿ ಮಾಡಲು ತಾವು ಮತ್ತು ತಮ್ಮ ಸಹೋದರ ಸಂಚು ನಡೆಸುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಬೆಂಗಳೂರಿಗೆ ಮರಳಿದ ನಂತರ ಉತ್ತರ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ: 'ಮಲ್ಲಿಕಾರ್ಜುನ್ ಏನೆಂದು ಜನರಿಗೆ ಗೊತ್ತಿದೆ': ಶಾಸಕ ಶಿವಗಂಗಾಗೆ ಸಂಸದೆ ಪ್ರಭಾ ತಿರುಗೇಟು