ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರಧನ ನೀಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ಅವರು ₹1 ಕೋಟಿ ಚೆಕ್ ನೀಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ರೈತರ ಬೆಳೆ ನಾಶ, ಜಾನುವಾರುಗಳು, ಮನೆ, ಸಾವು-ನೋವು ಮತ್ತಿತರ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಪರಿಹಾರ ಕೊಟ್ಟಿದ್ದಾರೆ.
ಉತ್ತರ ಕರ್ನಾಟಕ ಭಾಗ, ಮಲೆನಾಡು ಪ್ರದೇಶ ಹಾಗೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಹಲವು ಸಾವು-ನೋವುಗಳು ಕೂಡ ಸಂಭವಿಸಿವೆ.
ಈ ಘಟನೆಗೆ ಇಡೀ ಕರ್ನಾಟಕದ ರಾಜ್ಯವೇ ಬೆಚ್ಚಿಬಿದ್ದಿದ್ದು, ಸಾಕಷ್ಟು ಮಂದಿ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುತ್ತಿದ್ದಾರೆ. ದಿನನಿತ್ಯದ ಬಳಕೆಯ ವಸ್ತುಗಳನ್ನು ನೀಡುವ ಮೂಲಕ ರಾಜ್ಯದ ಜನರು ಸ್ಪಂದಿಸುತ್ತಿದ್ದು, ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಭರಪೂರವಾಗಿ ನೆರವು ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಮಾಡಿರುವ ಮನವಿಗೆ ಓಗೊಟ್ಟು ನಾವು ಈ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಎಂಟಿಬಿ ನಾಗರಾಜು ಹೇಳಿದ್ದಾರೆ.