ಬೊಮ್ಮನಹಳ್ಳಿ (ಬೆಂಗಳೂರು): ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಇಡೀ ಬೆಡ್ ಬ್ಲಾಕಿಂಗ್ ಹಗರಣದ ದಿಕ್ಕು ತಪ್ಪಿಸುವಲ್ಲಿ ಕಾಂಗ್ರೆಸ್ ಮತ್ತು ಅದರ ಬೆನ್ನಿಗಿರುವ ಎರಡು ಬುದ್ಧಿಜೀವಿಗಳು ಶ್ರಮಿಸುತ್ತಿದ್ದಾರೆ. ಹಾಸಿಗೆ ಹಿಡಿದಿಡುವ ದಂಧೆ ಬಿಬಿಎಂಪಿಯ ಎಲ್ಲಾ ವಾರ್ ರೂಂ ವ್ಯಾಪ್ತಿಯಲ್ಲೂ ನಡೆದಿದೆ. ಕೇವಲ ಏಕ ವ್ಯಕ್ತಿಯ ನಿರ್ದೇಶನದಂತೆ ನಡೆದಿಲ್ಲ. ಇದರಲ್ಲಿ ವ್ಯಾಪಕವಾದ ಜಾಲವಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪರ ವಕಾಲತ್ತು ವಹಿಸಿ ಹೇಳಿಕೆ ನೀಡಿದರು.
ಬೊಮ್ಮನಹಳ್ಳಿ ವ್ಯಾಪ್ತಿಯ ಕೋಡಿ ಚಿಕ್ಕನಹಳ್ಳಿ ರಸ್ತೆಯ ಆರ್.ಎಂ.ಆರ್ ಉದ್ಯಾನವನದಲ್ಲಿ ಎರಡನೇ ಕೋವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಸಂಸದರು, 4,500 ಹಾಸಿಗೆ ವಂಚಿತರ ಸಾವು-ನೋವಿನ ಕಡೆ ಮಾಧ್ಯಮ ಗಮನ ಹರಿಸಲಿ. ಹಾಸಿಗೆ ಬ್ಲಾಕಿಂಗ್ ಸಾಫ್ಟ್ವೇರ್ ಬಳಕೆಯ ಹಿಂದೆ ಇರುವ ವ್ಯವಸ್ಥೆಯನ್ನು ಪ್ರಶ್ನಿಸಲಿ. ಹಗರಣ ಬಯಲಿಗೆಳೆದವರನ್ನೇ ಹಗರಣದಲ್ಲಿ ಸಿಲುಕಿಸಿ ತನಿಖೆಯ ದಾರಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಪ್ರಸ್ತುತ ಸಿಸಿಬಿ ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿರುವುದಲ್ಲದೆ ಹೈಕೋರ್ಟ್ ವಿಶೇಷವಾಗಿ ಈ ಪ್ರಕರಣವನ್ನು ಗಮನಿಸುತ್ತಿದೆ. ಹಗರಣದ ಇನ್ನಷ್ಟು ಮಾಹಿತಿ ಬಯಲಾಗಲಿದೆ ಎಂದರು.
ಓದಿ: ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಮಣ್ಯ ವಿರುದ್ಧ ತನಿಖೆ ನಡೆಸಿ; ಮನವಿ ಸಲ್ಲಿಸಿದ ಕಾಂಗ್ರೆಸ್
ನಂತರ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿರುವುದು ನೋವು ತರಿಸಿದೆ. ಈ ನಡುವೆ ನಾವು ಎರಡನೇ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ್ದೇವೆ. ಸರ್ಕಾರದ ಅನುದಾನವಿಲ್ಲದೆ, ಸ್ಥಳೀಯ ಖಾಸಗಿ ಸಂಸ್ಥೆಗಳ ನೆರವಿನಿಂದ ಆಮ್ಲಜನಕಯುಕ್ತ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಇಲ್ಲಿ ಉಚಿತ ಊಟ, ಔಷಧಿ, ವೈದ್ಯಕೀಯ ಸೇವೆ ಒದಗಿಸಲಾಗುತ್ತದೆ. ಸೋಂಕಿತರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.