ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತೆ ಗುಡುಗಿದ್ದಾರೆ.
ಸಿಎಂ ಭೇಟಿ ಬಳಿಕ ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, 105 ಜನ ನಾವು ಗೆದ್ದೆವು. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು ಬಂದ್ರು. ಬಳಿಕ ಉಪಚುನಾವಣೆಯಲ್ಲಿ ಗೆದ್ದ ಸರ್ಕಾರ ಬಂದಿದೆ. ಇಲ್ಲಿ ಯಾರೂ ಹೊಂದಾಣಿಕೆ ರಾಜಕೀಯ ಮಾಡ್ತಿಲ್ಲ. ಚನ್ನಪಟ್ಟಣದಲ್ಲಿ ಸೋತಿರೋ ವ್ಯಕ್ತಿ, ಅವನಿಗೆ ನಾಚಿಕೆ ಆಗಬೇಕು. ಅರಣ್ಯ ಸಚಿವರಾಗಿ ಲೂಟಿ ಹೊಡೆದಿದ್ದಾರೆ. ತಾಕತ್ ಇದ್ದರೆ ನನ್ನ ವಿರುದ್ಧ ತೊಡೆ ತಟ್ಟಿ ಬರಲಿ, ಅವನು ಲೂಟಿ ಮಾಡಿರೋನು, ನನ್ನ ಬಳಿ ದಾಖಲಾತಿ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೆಗಾಸಿಟಿ ಹಗರಣ ಮಾಡಿರೋನು ಅವನು, ನನ್ನ ಬಳಿ ಎಲ್ಲಾ ದಾಖಲಾತಿ ಇದೆ. ಕೊರೊನಾ ಮುಗಿದ ಮೇಲೆ ಎಲ್ಲವನ್ನು ಮಾತಾಡ್ತೀವಿ, ಸಿಕ್ಸರ್ ಹೊಡೆಯೋದು ಗೊತ್ತು, ಫೋರ್ ಹೊಡೆಯೋದು ಗೊತ್ತು. ಕೊರೊನಾ ಮುಗಿದ ಮೇಲೆ ಎಲ್ಲಾ ಬಯಲು ಮಾಡ್ತೀವಿ ಎಂದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಇಂತಹ ಸಮಯದಲ್ಲಿ ನಾವು ರಾಜಕೀಯ ಮಾಡಬಾರದು. ಯಾರೋ ಒಬ್ಬರು ಮಾತಾಡಿದ್ರೆ ಸರ್ಕಾರಕ್ಕೆ ಧಕ್ಕೆ ಆಗುವುದಿಲ್ಲ. ಇಷ್ಟ ಇಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಹೋಗಿ. ಇದು ಮೂರು ಪಕ್ಷಗಳ ಸರ್ಕಾರ ಅಲ್ಲ. ಇದು ಬಿಜೆಪಿ ಸರ್ಕಾರ, ಬಿಜೆಪಿ ಚಿಹ್ನೆಯಲ್ಲಿ ಗೆದ್ದು ಹೀಗೆ ಮಾತಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಬೊಗಳೋರು ಬೊಗಳಲಿ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಇರುತ್ತಾರೆ. ವರಿಷ್ಠರೇ ಇದನ್ನ ಹೇಳಿದ್ದಾರೆ. ದೆಹಲಿಗೆ ಹೋಗೋರು ಕೇವಲ ಗೇಟು ಮುಟ್ಟಿ ಬರ್ತಾರೆ ಅಷ್ಟೇ ಎಂದು ಟಾಂಗ್ ನೀಡಿದರು.