ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಫೇಸ್ಬುಕ್ನಲ್ಲಿ ಅವಹೇಳನಕಾರಿ ಫೋಸ್ಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವಲ್ ಭೈರಸಂದ್ರ ಹಾಗೂ ಡಿ.ಜಿ.ಹಳ್ಳಿ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ಕೈ ಮೀರಿದೆ.
ನೂರಾರು ಸಂಖ್ಯೆಯಲ್ಲಿ ಡಿ.ಜಿ.ಹಳ್ಳಿ ಠಾಣೆ ಮುಂದೆ ಸೇರಿದ್ದ ಪ್ರತಿಭಟನಾಕಾರರು ನೋಡು ನೋಡುತ್ತಿದ್ದಂತೆ ಕೈಗೆ ಸಿಕ್ಕ ವಸ್ತುಗಳಿಂದ ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಇಲಾಖೆಯ ವಾಹನಗಳು ಹಾಗೂ ಸಾರ್ವಜನಿಕರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಖಾಸಗಿ ಸುದ್ದಿ ವಾಹಿನಿ ವರದಿಗಾರನ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಗಳ ಗುಂಪು ಚದುರಿಸಲು ಫೈರಿಂಗ್... ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು!
1500ಕ್ಕೂ ಹೆಚ್ಚು ಪೊಲೀಸರು ನಿಯೋಜನೆ
ಉದ್ವಿಗ್ನ ಪರಿಸ್ಥಿತಿ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿ 1500ಕ್ಕೂ ಹೆಚ್ಚು ಪೊಲೀಸರು ಬೀಡುಬಿಟ್ಟಿದ್ದಾರೆ. ಅಲ್ಲದೆ ಕೆಎಸ್ಆರ್ಪಿ, ಸಿಎಆರ್ ಸೇರಿದಂತೆ ಹೆಚ್ಚು ಪೋರ್ಸ್ಗಳನ್ನು ಕರೆಯಿಸಿಕೊಳ್ಳಲಾಗಿದೆ. ಎಲ್ಲೆಂದರಲ್ಲಿ ಕಿಡಿಗೇಡಿಗಳು ಬಾಟೆಲ್ ,ಕಲ್ಲು ಎಸೆಯುವ ಮೂಲಕ ಶಾಂತಿ ಭಂಗ ತರುವ ಕೆಲಸ ಮಾಡಿದ್ದಾರೆ.
ಮಾಹಿತಿ ಪಡೆದುಕೊಂಡ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ, ಪರಿಸ್ಥಿತಿ ಬಗ್ಗೆ ಹಿರಿಯ ಪೊಲೀಸರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಅವರಿಗೆ ಎಲ್ಲ ರೀತಿಯ ಅಧಿಕಾರ ನೀಡಿದ್ದಾರೆ. ಇದರ ಮಧ್ಯೆ ಸ್ಥಳಕ್ಕೆ ಕೆಎಸ್ಆರ್ಪಿ ಸೇರಿದಂತೆ ವಿವಿಧ ಪೋರ್ಸ್ ಕರೆಯಿಸಿಕೊಳ್ಳಲಾಗಿದೆ.
ತಪ್ಪು ಯಾರೇ ಮಾಡಿದರೂ ತಪ್ಪೇ: ಬೊಮ್ಮಾಯಿ
ಕಿಡಿಗೇಡಿಗಳಿಗೆ ಪೊಲೀಸ್ ಶೈಲಿಯಲ್ಲಿ ಉತ್ತರ ನೀಡುತ್ತೇವೆ. ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ. ಈಗಾಗಲೇ ಅಶ್ರುವಾಯ ಪ್ರಯೋಗ ಮಾಡಲಾಗಿದೆ ಎಂದು ಸಿಎಂಗೆ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಯಾರೇ ಅಗಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಿ.. ಯಾವ್ದೇ ಕಾರಣಕ್ಕೂ ಯಾರನ್ನೂ ರಕ್ಷಿಸುವ ಮಾತೇ ಇಲ್ಲ ಎಂದಿದ್ದಾರೆ.
ಸಂಪೂರ್ಣ ಪೋರ್ಸ್ ಹಾಕಿ ಘಟನೆ ನಿಯಂತ್ರಿಸಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ವಾರ್ಟಸ್ಗಳ ಮೇಲೆ ದಾಳಿ
ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪೊಲೀಸ್ ಕ್ವಾರ್ಟಸ್ಗಳ ಮೇಲೆ ಕಿಡಿಗೇಡಿಗಳು ದಾಂಧಲೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಡಿಸಿಪಿ ಭೀಮಾಶಂಕರ್ ಗುಳೇದ್ ಅವರ ಕಾರು ಸಹ ಜಖಂ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.