ಬೆಂಗಳೂರು: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಬಳಿಕ ಮಾತನಾಡಿದ ಎನ್.ಮಹೇಶ್, ಬಿಜೆಪಿಯನ್ನು ಬಹಳ ನಂಬಿಕೆ, ವಿಶ್ವಾಸ ಮತ್ತು ಖುಷಿಯಿಂದ ಸೇರಿದ್ದೇನೆ. ಪಕ್ಷದ ಧ್ಯೇಯ, ರಾಷ್ಟ್ರದ ಅಭಿವೃದ್ಧಿಯ ಚಿಂತನೆಯನ್ನು ಆಧರಿಸಿ ಪಕ್ಷ ಸೇರಿದ್ದಾಗಿ ತಿಳಿಸಿದರು.
ಬಿಜೆಪಿ ಅಭಿವೃದ್ಧಿಯೆಡೆಗೆ ದೇಶವನ್ನು ಕೊಂಡೊಯ್ಯುತ್ತಿದೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರಿರುವುದು ನನಗೆ ಇನ್ನಷ್ಟು ವಿಶ್ವಾಸ ತಂದುಕೊಟ್ಟಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದಾಗಲೂ ಅವರು ಸಹ ನನಗೆ ಒಪ್ಪಿಗೆ ಸೂಚಿಸಿದ್ದರು. ಅನೇಕ ರಾಜಕೀಯ ಏರುಪೇರಿನ ನಡುವೆ ಬಿಜೆಪಿಗೆ ಸೇರಿದ್ದೇನೆ. ಬಿಜೆಪಿಯ ಸಂಘಟನೆಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡಲಿದ್ದೇನೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಬಹಳದಿನದಿಂದ ನಾವು ಕಾಯುತ್ತಿದ್ದ ಶುಭಗಳಿಗೆ ಬಂದಿದೆ. ಇಡೀ ದೇಶದ ಉದ್ದಗಲಕ್ಕೂ ಪರಿಶಿಷ್ಟ ಜಾತಿ, ವರ್ಗದ ಜನರು ಬಿಜೆಪಿಗೆ ಸೇರುವ ಸೂಚನೆ ಇದಾಗಲಿದೆ ಎಂದರು. ಕರ್ನಾಟಕದಲ್ಲಿ ಹಿಂದುಳಿದ ವರ್ಗ ಬಿಜೆಪಿಯ ಹಿಂದಿದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿಯವರಿಗೆ ಹೋಗುವಂತೆ ನೀವು ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತರಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಿಂದ 130 ವಿಧಾನಸಬೆ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಈಗ ಪಕ್ಷ ಸಂಘಟನೆಗೆ ಇನ್ನಷ್ಟು ಬಲ ಬಂದಂತಾಗಿದೆ. ಈ ಭಾಗದಲ್ಲಿ ಬಿಜೆಪಿಗೆ ಆನೆಬಲ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಹೇಶ್ ನಮ್ಮ ಆತ್ಮೀಯ ಸ್ನೇಹಿತರು, ಚಳವಳಿ ಹಿನ್ನೆಲೆಯಿಂದ ಬಂದವರು, ಅವರ ಸಂಘಟನಾ ಶಕ್ತಿ ಅಗಾದ, ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದರು. ಹಿಂದೆ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಇದೀಗ ಬಿಜೆಪಿಗೆ ಬಂದಿರುವುದು ಇನ್ನಷ್ಟು ಬಲ ಬಂದಿದೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಎನ್.ಮಹೇಶ್ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು. ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ: ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು