ಬೆಂಗಳೂರು: ನಾನು ವರನಟ ಡಾ. ರಾಜಕುಮಾರ್ ಅಭಿಮಾನಿ. ಅವರ ಬಗ್ಗೆ ಯಾವುದೇ ಕಾರಣಕ್ಕೂ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಸ್ಪಷ್ಟೀಕರಣ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ದೊಮ್ಮಲೂರು ಭಾಗದಲ್ಲಿ ಕ್ಷೇತ್ರ ವ್ಯಾಪ್ತಿಯ ಒಂದಿಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು. ಅದರ ವೀಕ್ಷಣೆಗೆ ತೆರಳಿದ್ದ ಸಂದರ್ಭ ಈ ಒಂದು ವಿಡಿಯೋ ತೆಗೆಯಲಾಗಿದೆ. ಆ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಇದೇ ದೊಮ್ಮಲೂರು ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆ ಕೂಡ ಸ್ಥಾಪಿಸಿದ್ದೇವೆ. ಅಲ್ಲಿ ನಾನೇನು ಅವಹೇಳನಕಾರಿಯಾಗಿ ಮಾತನಾಡಿಲ್ಲ, ಕೇವಲ ಪ್ರತಿಮೆಗಳನ್ನು ವೀಕ್ಷಿಸಲು ತೆರಳಿದ್ದೆ ಎಂದರು.
ರಾಜಕುಮಾರ್ ಪ್ರತಿಮೆ ಪಕ್ಕ ಒಂದು ಫಲಕ ಅಳವಡಿಸಲಾಗಿದೆ. ಅದರ ಬಗ್ಗೆ ನಾನು ಮಾತನಾಡಿದ್ದನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನಾನು ರಾಜಕುಮಾರ್ ಅಭಿಮಾನಿ ಮಾತ್ರವಲ್ಲ, ಸಮಾರಂಭದ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗೆಲ್ಲ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನು ಹಾಡುತ್ತಿರುತ್ತೇನೆ. ಇಡೀ ಮಾನವ ಕುಲಕ್ಕೆ ಸಂದೇಶ ನೀಡುವ ವ್ಯಕ್ತಿಯ ಬಗ್ಗೆ ನಾನು ಹೇಗೆ ಮಾತನಾಡಲು ಸಾಧ್ಯ ಎಂದರು.
ಅಂತಾರಾಷ್ಟ್ರೀಯ ಅಣ್ಣ ಅಂದರೆ ಅದು ರಾಜಕುಮಾರ್ ಅವರೇ. ಹೋಗಿ ಹೋಗಿ ಅವರ ಬಗ್ಗೆ ಯಾರಾದರೂ ಮಾತನಾಡುತ್ತಾರಾ?. ಉದ್ದೇಶಪೂರ್ವಕವಾಗಿ ಕಟ್ ಅಂಡ್ ಪೇಸ್ಟ್ ಮಾಡಿ ಈ ವಿಡಿಯೋ ವೈರಲ್ ಮಾಡಲಾಗಿದೆ. ಈ ರೀತಿಯ ಕಾರ್ಯವನ್ನು ಮಾಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದವರನ್ನು ವಿನಂತಿಸಿಕೊಂಡರು.
ಡಾ. ರಾಜಕುಮಾರ್ ಪರವಾಗಿ ಏನನ್ನು ಬೇಕಾದರೂ ಮಾಡಲು ನಾನು ಸಿದ್ಧನಿದ್ದೇನೆ. ರಾಜಕುಮಾರ್ ಪ್ರತಿಮೆಯನ್ನು ಸಂಪೂರ್ಣ ಮೇಲ್ಭಾಗದಲ್ಲಿ ಬೇರೆ ವಸ್ತುಗಳನ್ನು ಇಟ್ಟು ಮುಚ್ಚಲಾಗಿದೆ. ಅದನ್ನು ತೆರವುಗೊಳಿಸಿ ಪ್ರತಿಮೆ ಕಾಣುವಂತೆ ಮಾಡಿ ಎಂದು ಸಲಹೆ ನೀಡಿದ್ದೇನೆ. ಪ್ರತಿಮೆ ಸ್ಥಾಪಿಸಿದ ಮೇಲೆ ಈ ರೀತಿ ಅದನ್ನ ಮುಚ್ಚಿಡುವುದು ಎಷ್ಟು ಸರಿ?. ಪ್ರತಿಮೆ ಇಟ್ಟ ಮೇಲೆ ಅದು ಎಲ್ಲರಿಗೂ ಗೋಚರಿಸುವಂತೆ ಇಡಬೇಕು.
ನಾನು ಅಲ್ಲಿ ಮಾತನಾಡಿದ ಸಂಪೂರ್ಣ ವಿಡಿಯೋ ಫೇಸ್ಬುಕ್ನಲ್ಲಿ ಲಭ್ಯವಿದ್ದು, ಅದನ್ನು ಪೂರ್ತಿ ವೀಕ್ಷಣೆ ಮಾಡಿದರೆ ಅರ್ಥವಾಗುತ್ತದೆ. ಅಲ್ಲಿ ನಾನು ನೀಡಿದ್ದು ಸಲಹೆ ಮಾತ್ರ. ಅವಹೇಳನಕಾರಿಯಾಗಿ ಮಾತನಾಡಿಲ್ಲ. ಇಲ್ಲದಿರುವ ವಿಚಾರವನ್ನ ತಂದು ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ. ಪ್ರೀತಿ ವಿಶ್ವಾಸದಲ್ಲಿ ಎಲ್ಲರೂ ಜೊತೆಯಾಗಿ ತೆರಳಬೇಕು ಎಂದರು.
ಕೆಂಪೇಗೌಡ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ನಾನಾಗಿದ್ದೆ. ಸಿನಿಮಾ ಸಂಪರ್ಕದಲ್ಲಿದ್ದು, ಅಲ್ಲಿಯೇ ದೊಡ್ಡವನಾಗಿದ್ದೇನೆ. ಆರತಿ ಮಾತನಾಡುವ ಅಗತ್ಯವೂ ನನಗಿಲ್ಲ. ಒಂದೊಮ್ಮೆ ನನ್ನ ಮಾತಿನ ವಿಚಾರದಲ್ಲಿ ಏನಾದರೂ ಗೊಂದಲವಾಗಿದ್ದರೆ ಅದಕ್ಕೆ ಈಗ ಸ್ಪಷ್ಟೀಕರಣ ನೀಡಿದ್ದೇನೆ ಎಂದು ವಿವರಿಸಿದರು.