ಬೆಂಗಳೂರು: ಗೃಹ ಮಂಡಳಿ ಆಯುಕ್ತರಿಗೆ ವಹಿಸಲಾಗಿರುವ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿಯಿಂದ ಮುಕ್ತಗೊಳಿಸಿ ಕೇವಲ ಗೃಹ ಮಂಡಳಿಗೆ ಸೀಮಿತವಾದ ಜವಾಬ್ದಾರಿ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಸತಿ ಸಚಿವ ವಿ.ಸೋಮಣ್ಣ ಮನವಿ ಸಲ್ಲಿಸಿದರು.
ಸಿಎಂ ಗೃಹಕಚೇರಿ ಕೃಷ್ಣಾಗೆ ಭೇಟಿ ನೀಡಿದ ವಸತಿ ಸಚಿವ ವಿ.ಸೋಮಣ್ಣ, ಕೆಹೆಚ್ಬಿ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ರಮೇಶ್ ಅವರಿಗೆ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿ ಇರುವ ಕುರಿತು ಸಿಎಂ ಗಮನಕ್ಕೆ ತಂದರು.
ಗೃಹ ಮಂಡಳಿ ಆಯುಕ್ತರಿಗೆ ಎರಡು ಮೂರು ಇಲಾಖೆಗಳ ಜವಾಬ್ದಾರಿ ವಹಿಸಿರುವುದರಿಂದ ಅವರಿಗೆ ಎಲ್ಲೂ ನ್ಯಾಯ ಸಲ್ಲಿಸಲು ಆಗುವುದಿಲ್ಲ. ಹೌಸಿಂಗ್ ಬೋರ್ಡ್ ಆಯುಕ್ತ ಜವಾಬ್ದಾರಿ ಮಾತ್ರ ಇರಲಿ. ಅವರಿಗೆ ವಹಿಸಿರುವ ಇತರೆ ಜವಾಬ್ದಾರಿಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಿ ಎಂದು ಸಿಎಂಗೆ ವಸತಿ ಸಚಿವ ವಿ.ಸೋಮಣ್ಣ ಮನವಿ ಮಾಡಿದರು. ಖುದ್ದು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿ ನಂತರ ಕೆಲಕಾಲ ಸಿಎಂ ಜೊತೆ ಚರ್ಚಿಸಿದರು.