ಬೆಂಗಳೂರು: ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, ಹೋರಾಟ ಹಾರಾಟ ಆಗಬಾರದು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ಭಾಷೆಗೆ ಸಂಬಂಧಿಸಿದ್ದಲ್ಲ. ಮರಾಠ ಜನಾಂಗದ ಬಡವರ ಏಳಿಗೆಗೆ ನಿಗಮ ಮಾಡಿದ್ದು, ಇದು ಕೇವಲ ಬೆಳಗಾವಿಯಲ್ಲಿರುವ ಮರಾಠಿಗರಿಗೆ ಮಾಡಿದ್ದಲ್ಲ. ಕರ್ನಾಟಕದ ಅನೇಕ ಭಾಗಗಳಲ್ಲಿ ಮರಾಠ ಸಮುದಾಯದವರು ಇದ್ದಾರೆ. ಮರಾಠ ಸಮುದಾಯದ ನಿಗಮ ಮಾಡಿರುವುದು ಜನಾಂಗದ ಅಭಿವೃದ್ಧಿಗಾಗಿ ಹೊರತು ಭಾಷೆಗಾಗಿ ಅಲ್ಲ. ಬಂದ್ಗೆ ಕರೆ ನೀಡಿರುವ ಸಂಘಟನೆಗಳ ಹೋರಾಟ ಹಾರಾಟ ಆಗಬಾರದು. ಈಗಾಗಲೇ ಬಂದ್ ಮಾಡುವ ಬಗ್ಗೆ ಜನಸಾಮಾನ್ಯರಿಗೆ ಬೇಸರ ಮೂಡಿಸಿದೆ. ನಿಗಮವನ್ನು ಜನಾಂಗಕ್ಕೆ ಮಾಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನ್ಯಾಯಾಲಯವು ಕೂಡ ಬಂದ್ಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ರಾಜ್ಯದ ಜನ ಬಂದ್ಗೆ ಬೆಂಬಲ ನೀಡುವುದಿಲ್ಲವೆಂಬ ವಿಶ್ವಾಸವಿದೆ ಎಂದರು. ಶಾಂತಿಯುತ ಪ್ರತಿಭಟನೆ ಮಾಡಲಿ, ಅದನ್ನು ಬಿಟ್ಟು ಬಂದ್ ಮಾಡುವುದು ಸರಿಯಲ್ಲ. ಹಾಗಾಗಿ ಬಂದ್ ಕೈಬಿಡುವಂತೆ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದರು.