ಬೆಂಗಳೂರು: ಹಲವು ವರ್ಷಗಳಿಂದ ರಾಜಧಾನಿಯಲ್ಲಿ ನೆಲೆಯೂರಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ತಾಹೀಬ್ ಹುಸೇನ್ ಅಲಿಯಾಸ್ ತಾರೀಕ್ನನ್ನು ಜಮ್ಮು-ಕಾಶ್ಮೀರ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸ್ಥಳೀಯ ಉಗ್ರ ನಿಗ್ರಹ ಸಂಸ್ಥೆಗಳು ಸಾಕಷ್ಟು ತಲೆಕೆಡಿಸಿಕೊಂಡಿವೆ. ಹಲವು ವರ್ಷಗಳಿಂದ ನಗರದಲ್ಲಿ ಉಗ್ರ ಬಿಡಾರ ಹೂಡಿದ್ದರೂ ರಾಜ್ಯ ಗುಪ್ತಚರ ಇಲಾಖೆ ಹಾಗೂ ಸಿಸಿಬಿಯಲ್ಲಿರುವ ಭಯೋತ್ಪಾದನಾ ನಿಗ್ರಹ ಘಟಕಕ್ಕೆ (ಎಟಿಸಿ) ಮಾಹಿತಿಯೇ ಇರಲಿಲ್ಲ!.
1. ಪರೋಕ್ಷ ಉಗ್ರ ಚಟುವಟಿಕೆ: ಈತ ನೆಲೆಸಿದ್ದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ನಡೆಸಿಲ್ಲ. ಆದರೂ ಜಮ್ಮು ಕಾಶ್ಮೀರದಲ್ಲಿ ನಡೆಯುವ ಕಲ್ಲು ತೂರಾಟ, ಹಿಂಸಾಚಾರ ಘಟನೆಗಳ ಹಿಂದೆ ಈತ ಪರೋಕ್ಷವಾಗಿ ಭಾಗಿಯಾಗಿರುವುದು ಕಂಡುಬಂದಿದೆ. ನಿರ್ದಿಷ್ಟವಾಗಿ ಇಂತಹ ಪ್ರಕರಣದಲ್ಲಿಯೇ ಭಾಗಿಯಾಗಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಇಲ್ಲಿನ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಉಗ್ರನನ್ನು ವಶಕ್ಕೆ ಪಡೆದು ಕರೆದೊಯ್ಯುವಾಗ ಶ್ರೀರಾಮಪುರ ಪೊಲೀಸರಿಗೆ ಉರ್ದು ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿದ್ದ ಎಫ್ಐಆರ್ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದ ಐಪಿಸಿ ಸೆಕ್ಷನ್ಗಳನ್ನು ಗಮನಿಸಿದಾಗ ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡಿರುವುದು ಗೊತ್ತಾಗಿದೆ.
2. ಐಎಸ್‌ಡಿ, ಎಟಿಸಿ ತನಿಖೆ ಚುರುಕು: ಉಗ್ರನನ್ನು ಬಂಧಿಸುತ್ತಿದ್ದಂತೆ ಎಚ್ಚೆತ್ತಿರುವ ರಾಜ್ಯ ಆಂತರಿಕಾ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಎಟಿಸಿ ಅಧಿಕಾರಿಗಳು ಉಗ್ರ ನೆಲೆಸಿದ್ದ ಬಾಡಿಗೆ ಮನೆ, ಕೆಲಸ ಮಾಡುತ್ತಿದ್ದ ಜಾಗ, ಮಸೀದಿ ಸೇರಿದಂತೆ ಉಗ್ರನಿಗೆ ಪರಿಚಿತರನ್ನು ಭೇಟಿ ಮಾಡಿ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಿದ್ದಾರೆ. ಉಗ್ರ ತಮ್ಮ ಮಕ್ಕಳನ್ನು ಬನಶಂಕರಿ ಬಳಿಯ ಜಾಮೀಯಾ ಮಸೀದಿಯಲ್ಲಿ ಮದರಸ ಶಿಕ್ಷಣಕ್ಕೆ ಸೇರಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಉಗ್ರ ತಾಲೀಬ್ ಹುಸೇನ್ ಬಂಧನ: ಐಎಸ್‌ಡಿಯಿಂದ ಮನೆ ಮಾಲೀಕನ ವಿಚಾರಣೆ
3. ಅಧಿಕೃತ ಮಾಹಿತಿ ಕೊರತೆ: ಪ್ರಾಥಮಿಕ ತನಿಖೆಯಲ್ಲಿ ಉಗ್ರನಿಗೆ ಸಹಾಯ ಮಾಡಿದ ವ್ಯಕ್ತಿಗಳಿಗೆ ತಾಹೀಬ್ ಹುಸೇನ್ ಓರ್ವ ಉಗ್ರ ಎಂದು ಗೊತ್ತೆ ಇರಲಿಲ್ಲ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಸದ್ಯ ಯಾರನ್ನು ಅಧಿಕಾರಿಗಳು ಅನುಮಾನಿಸುವ ಸ್ಥಿತಿಯಲ್ಲಿಲ್ಲ. ಜಮ್ಮು-ಕಾಶ್ಮೀರ ಪೊಲೀಸರಿಗೆ ಐಎಸ್‌ಡಿ ಹಾಗೂ ಎಟಿಸಿ ಅಧಿಕಾರಿಗಳು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರೂ ಸಂಪರ್ಕಕ್ಕೂ ಸಿಕ್ಕಿಲ್ಲ. ಉಗ್ರನ ಬಗ್ಗೆ ಸಂಪೂರ್ಣ ಅಧಿಕೃತ ಮಾಹಿತಿ ಇಲ್ಲದಿರುವುದು ತನಿಖೆಗೆ ಅಡಚಣೆಯಾಗುತ್ತಿದೆ. ಉಗ್ರನೆಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ನೆರವು ನೀಡಿದವರ ಬಗ್ಗೆ ಅಧಿಕೃತವಾಗಿ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿದಾಗ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
4. ಸಿಮ್ ಕಂಪೆನಿಗೆ ಎಟಿಸಿ ಪತ್ರ: ಸ್ಥಳೀಯ ಎಟಿಸಿ ಅಧಿಕಾರಿಗಳು ಜಮ್ಮು ಕಾಶ್ಮೀರದ ಎಟಿಸಿಯೊಂದಿಗೆ ಸಂಪರ್ಕಿಸಿದರೂ ಪ್ರಯೋಜನವಾಗದ ಕಾರಣ ತಾಹಿಬ್ ಹಾಗೂ ಆತನ ಹೆಂಡತಿ ಬಳಸುತ್ತಿದ್ದ ಸಿಮ್ ಖರೀದಿ ಯಾರ ಹೆಸರಿನಲ್ಲಿದೆ? ಕಳೆದ ಎರಡು ವರ್ಷಗಳಿಂದ ಯಾರಾರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರು ಎಂಬುದರ ಮೊಬೈಲ್ ನಂಬರ್ಗಳ ವಿವರ ಕೋರಿ ಸಿಮ್ ಕಂಪನಿಯೊಂದಕ್ಕೆ ಪತ್ರ ಬರೆದಿದ್ದಾರೆ. ಎರಡು ವರ್ಷಗಳ ಕಾಲ ಸಂಪರ್ಕ ಕರೆಗಳ ಬಗ್ಗೆ ಡೇಟಾ ಲಭ್ಯತೆ ಇರುವುದರಿಂದ ಸಿಮ್ ಕಂಪನಿಗೆ ಡಿಟೈಲ್ಸ್ ನೀಡುವಂತೆ ಎಟಿಸಿ ಮಾಹಿತಿ ಕೇಳಿದೆ.
ಇದನ್ನೂ ಓದಿ:ಆಪರೇಷನ್ ತಾಹಿಬ್ ಬಂಧನ ಕಾರ್ಯಾಚರಣೆ ಹೇಗಿತ್ತು..? ಖೆಡ್ಡಾಕ್ಕೆ ಉಗ್ರ ಬಿದ್ದಿದ್ದೆಂಗೆ ಗೊತ್ತಾ?
ಮುಖ್ಯವಾಗಿ, ಕಳೆದ ಆರು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲ್ಲಿನವರೊಂದಿಗೆ ಮೊಬೈಲ್ನಲ್ಲಿ ಯಾರಾದರೂ ಜೊತೆ ಮಾತನಾಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಅತಿ ಹೆಚ್ಚು ಬಾರಿ ಯಾವ ವ್ಯಕ್ತಿಗಳ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದರ ಕುರಿತು ಪಟ್ಟಿ ಮಾಡಲಿರುವ ಅಧಿಕಾರಿಗಳು ಅನುಮಾನಾಸ್ಪಾದ ವ್ಯಕ್ತಿ ಎಂದು ಕಂಡುಬಂದರೆ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
5. ಕಾಶ್ಮೀರಕ್ಕೆ ತನಿಖಾ ತಂಡ ಭೇಟಿ ಸಾಧ್ಯತೆ: ಉಗ್ರನನ್ನು ಬಂಧಿಸಿರುವ ಕಾಶ್ಮೀರ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ಇತ್ತ ಸ್ಥಳೀಯವಾಗಿ ತಾರೀಕ್ ಎಂದು ಗುರುತಿಸಿಕೊಂಡಿದ್ದ ಉಗ್ರನ ಜೊತೆ ಬೆಂಗಳೂರಿನಲ್ಲಿ ಪರೋಕ್ಷವಾಗಿ ದುಷ್ಕೃತ್ಯಗಳಿಗೆ ಯಾರಾದರೂ ನೆರವು ನೀಡಿದ್ದಾರಾ ಎಂಬುದರ ತನಿಖೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಶ್ಮೀರಕ್ಕೆ ಐಎಸ್‌ಡಿ ಅಥವಾ ಎಟಿಸಿ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.