ಬೆಂಗಳೂರು: ಉಪ ಚುನಾವಣೆಯಲ್ಲಿ ಪರಾಜಿತರಾಗಿರುವ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಬಾಕಿ ಉಳಿದ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಬೇಕು ಎಂದು ನೂತನ ಶಾಸಕರು ತೀರ್ಮಾನ ಕೈಗೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಶಾಸಕರ ಸಭೆ ನಡೆಯಿತು. ಡಿನ್ನರ್ ವಿಥ್ ಮೀಟಿಂಗ್ನಲ್ಲಿ ಶಾಸಕರಾದ ಬಿ.ಸಿ. ಪಾಟೀಲ್, ಕೆ.ಸಿ. ನಾರಾಯಣ ಗೌಡ, ಅನರ್ಹ ಶಾಸಕರಾದ ಆರ್.ಶಂಕರ್, ಪ್ರತಾಪ್ ಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಅನರ್ಹ ಶಾಸಕ ಮುನಿರತ್ನ, ಪರಾಜಿತ ಅಭ್ಯರ್ಥಿ ಎಚ್.ವಿಶ್ವನಾಥ್, ಶಾಸಕ ಭೈರತಿ ಬಸವರಾಜ್, ಶಾಸಕರಾದ ರಮೇಶ್ ಜಾರಕಿಹೊಳಿ, ಡಾ. ಸುಧಾಕರ್, ಮಹೇಶ್ ಕುಮಟಳ್ಳಿ, ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಕೂಡಾ ಹಾಜರಾಗಿದ್ದರು. ಆದರೆ ಶಾಸಕರಾದ ಆನಂದ್ ಸಿಂಗ್, ಶಿವರಾಮ ಹೆಬ್ಬಾರ್, ಶ್ರೀಮಂತ ಪಾಟೀಲ್, ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅನುಪಸ್ಥಿತಿಯಿತ್ತು.
ಸೋತಿರುವ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್‌ಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು, ಈ ಬಗ್ಗೆ ಬಿಜೆಪಿ ನಾಯಕರಿಗೆ ಹಾಗೂ ಸಿಎಂ ಬಿಎಸ್‌ವೈಗೆ ಒತ್ತಡ ಹೇರುವ ಬಗ್ಗೆ ಚರ್ಚಿಸಿದ್ದು, ಇಬ್ಬರಿಗೂ ಸೂಕ್ತ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಯಿತು.
ಇನ್ನೂ ಮುನಿರತ್ನ ಮತ್ತು ಪ್ರತಾಪ್‌ಗೌಡ ಪಾಟೀಲ್ ಕ್ಷೇತ್ರಗಳಿಗೂ ಶೀಘ್ರ ಚುನಾವಣೆ ನಡೆಯುವ ರೀತಿ ನೋಡಿಕೊಳ್ಳಬೇಕು, ಬಿಜೆಪಿಯವರೇ ಕೇಸ್ ಹಾಕಿರುವುದರಿಂದ ಒತ್ತಡ ಹೇರಿ ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಮುನಿರತ್ನ ಮತ್ತು ಪ್ರತಾಪ್‌ಗೌಡ ಪಾಟೀಲ್ ಕೂಡ ಶೀಘ್ರವೇ ಸಚಿವರಾಗಲು ಆರ್.ಆರ್ ನಗರ ಮತ್ತು ಮಸ್ಕಿಯಲ್ಲಿ ಚುನಾವಣೆ ನಡೆಯುವಂತೆ ಒತ್ತಡ ಹೇರಬೇಕೆಂದು ತೀರ್ಮಾನಿಸಲಾಯಿತು. ಉಪಚುನಾವಣೆ ಪೂರ್ವದಲ್ಲಿ ಕೊಟ್ಟಿರುವ ಭರವಸೆಗಳನ್ನು ಮತ್ತೊಮ್ಮೆ ನೆನಪಿಸಬೇಕು ನಾವು ಬಿಜೆಪಿ ಸೇರ್ಪಡೆಗೆ ಮುನ್ನ ಆಗಿರುವ ಮಾತುಕತೆಗಳು ಏನೇನು ಎಂಬುದು ಯಡಿಯೂರಪ್ಪ, ಅರವಿಂದ ಲಿಂಬಾವಳಿ ಮತ್ತು ಅಮಿತ್ ಶಾ ಅವರಿಗೆ ಗೊತ್ತಿದೆ ಅವರಿಗೆ ಅದನ್ನು ನೆನಪಿಸುವ ಕೆಲಸ ಮಾಡೋಣ ಎಂದು ಸಭೆಯಲ್ಲಿ ಚರ್ಚೆ ನಡೆಸಿರುವ ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ.