ಬೆಂಗಳೂರು: ದಿನಕ್ಕೊಂದು ಸಭೆ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಉಪ ಚುನಾವಣೆಗೆ ಸಜ್ಜಾಗುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ಗೆ ಪ್ರಬಲ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ವೀಕ್ಷಕರ ಸಭೆ ನಡೆಯಲಿದೆ. ಅದೇ ರೀತಿ ನಾಳೆ ಬೆಳಿಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಜೊತೆಗೆ ಮಧ್ಯಾಹ್ನ ನಗರದ ಪುರಭವನದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಖಂಡಿಸಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸಲು ನಿನ್ನೆ ಬಿಬಿಎಂಪಿ ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ ಬಾಬ್ರಿ ಮಸೀದಿ ಧ್ವಂಸ ಹಾಗೂ ಅಯೋಧ್ಯೆ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ ಹಿನ್ನೆಲೆ ಸಭೆಯನ್ನು ರದ್ದು ಪಡಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಮತ್ತೆ ನಡೆಸಲು ಯೋಜಿಸಲಾಗಿದೆ.
ಇಂದಿನ ಸಭೆ: ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬೆಂಗಳೂರು ಕೇಂದ್ರ, ಉತ್ತರ, ಬೆಳಗಾವಿ, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ನೇಮಕಗೊಂಡಿರುವ ವೀಕ್ಷಕರ ಸಭೆ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಚುನಾವಣೆಗೆ ಗೆಲುವಿನ ಕಾರ್ಯತಂತ್ರ ರೂಪಿಸುವ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಇದಾದ ಬಳಿಕ ಬೆಂಗಳೂರು ನಗರ ವ್ಯಾಪ್ತಿಯ ಬಿಬಿಎಂಪಿ ಸದಸ್ಯರನ್ನು ಒಗ್ಗೂಡಿಸಿ ಸಭೆ ನಡೆಸುವ ಚಿಂತನೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಕೂಡ ನಗರದ ನಾಲ್ಕು ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲುವ ಕಾರ್ಯತಂತ್ರ ಹೆಣೆಯಲಾಗುತ್ತದೆ.
ವಿವಿಧ ಮುಖಂಡರುಗಳು ಹಾಗೂ ಸ್ಥಳೀಯ ನಾಯಕರ ಜೊತೆ ಸುದೀರ್ಘ ಸಭೆ ನಡೆಸಿ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯುವ ಕುರಿತು, ಅಲ್ಲದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪರದೆಯನ್ನು ಯಾವ ರೀತಿ ಎದುರಿಸಬೇಕೆಂಬ ಕುರಿತು ಚರ್ಚಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಯೋಜನೆ ರೂಪಿಸುವ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಮುಂದಾಗಿದ್ದಾರೆ. ಇಂದಿನ ಸಭೆಯಲ್ಲಿ ದಿನೇಶ್ ಗುಂಡೂರಾವ್ ಜೊತೆ ಇನ್ನಿತರ ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.