ಬೆಂಗಳೂರು: ಜನರಿಂದ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 10.80 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 10 ದ್ವಿಚಕ್ರ ವಾಹನಗಳು, 10 ಮೊಬೈಲ್ ಹಾಗೂ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ.
ವಾಹೀದ್ ಪಾಷಾ(20), ಅಶೋಕ್ (19) ಮತ್ತು ಅರ್ಬಾಜ್ (19) ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳಿಂದ ಆಟೋ ರಿಕ್ಷಾ, 5 ಬಜಾಜ್ ಪಲ್ಸರ್, 3 ಹೋಂಡಾ ಡಿಯೋ, ಬಜಾಜ್ ಡಿಸ್ಕವರ್, ಪ್ಲಾಟಿನಾ ದ್ವಿಚಕ್ರ ವಾಹನ ಮತ್ತು 10 ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬ೦ಧನದಿ೦ದ ಮಡಿವಾಳ ಪೊಲೀಸ್ ಠಾಣೆಯ 1 ಪ್ರಕರಣ, ಕೋರಮಂಗಲ 2, ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿನಗರ, ಎಸ್.ಜೆ.ಪಾಳ್ಯ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ಪತ್ತೆಯಾಗಿವೆ. ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ ಎಂದು ತಿಳಿದು ಬಂದಿದೆ.