ಬೆಂಗಳೂರು : ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಜೈಲಾಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಎಐಎಂಡಿಎಂಕೆ ಪಕ್ಷದ ಮುಖಂಡರಾದ ವಿ ಕೆ ಶಶಿಕಲಾ ನಟರಾಜನ್ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಗೈರು ಹಾಜರಾದ ಹಿನ್ನೆಲೆ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಶಶಿಕಲಾ ಹಾಗೂ ಸಹ ಆರೋಪಿತೆಯಾಗಿರುವ ಇಳವರಸಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯವು ಹಲವು ಬಾರಿ ನೊಟೀಸ್ ಜಾರಿ ಮಾಡಿತ್ತು. ಇಂದು ವಿಚಾರಣೆ ಹಿನ್ನೆಲೆಯಲ್ಲಿ ಗೈರಾದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರಂಟ್ ಆದೇಶ ಹೊರಡಿಸಿದೆ.
ಅಕ್ರಮ ಆಸ್ತಿ ಸಂಪಾದನೆಯಡಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿದ್ದ ಶಶಿಕಲಾ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ವಿಶೇಷ ಸೌಲಭ್ಯ ಕಲ್ಪಿಸಲು ಕೋಟ್ಯಂತರ ರೂಪಾಯಿ ಲಂಚ ನೀಡಿದ ಆರೋಪ ಕೇಳಿಬಂದಿತ್ತು. ಆಗಿನ ಡಿಐಜಿಯಾಗಿದ್ದ (ಕಾರಾಗೃಹ) ಡಿ. ರೂಪಾ ಅವರು ಆಪಾದಿಸಿದ್ದರು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತ್ಯೇಕವಾಗಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಮಧ್ಯೆ ಲಂಚ ಪಡೆದ ಆರೋಪ ಎದುರಿಸಿದ್ದ ಕಾರಾಗೃಹ ಇಲಾಖೆಯ ಡಿ ಜಿ ಸತ್ಯನಾರಾಯಣ ರಾವ್, ಜೈಲಾಧಿಕಾರಿ ಕೃಷ್ಣಕುಮಾರ್, ಜೈಲು ಅಧೀಕ್ಷಕಿ ಅನಿತಾ ಸೇರಿದಂತೆ ಇನ್ನಿತರ ವಿರುದ್ಧ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯ ಸಹ ಅಧಿಕಾರಿಗಳ ಮೇಲಿದ್ದ ಪ್ರಕರಣವನ್ನ ಖುಲಾಸೆಗೊಳಿಸಿತ್ತು. ಅಲ್ಲದೆ ತಮ್ಮ ಮೇಲಿನ ಪ್ರಕರಣ ರದ್ದು ಕೋರಿ ಶಶಿಕಲಾ ಸಹ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಭ್ರಷ್ಟಾಚಾರದ ಪ್ರಕರಣ ಕುರಿತಂತೆ 2022ರಿಂದಲೂ ವಿಚಾರಣೆ ನಡೆಯುತ್ತಿದೆ. ಹಲವು ಬಾರಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಿರಲಿಲ್ಲ. ಇಂದು ಸಹ ಹಾಜರಾಗದ ಹಿನ್ನೆಲೆ ಶಶಿಕಲಾ ಹಾಗೂ ಇಳವರಸಿಗೆ ಜಾಮೀನುರಹಿತ ವಾರೆಂಟ್ ಆದೇಶಿಸಿ, ಅಕ್ಟೋಬರ್ 5ರಂದು ವಿಚಾರಣೆಯನ್ನ ಮುಂದೂಡಿದೆ.
ಇದನ್ನೂ ಓದಿ : ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆ ಅಧಿಸೂಚನೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್