ಬೆಂಗಳೂರು: ಸಾಲಬಾಧೆಗೆ ಬೇಸತ್ತು ಬ್ಲಾಕ್ಮೇಲ್ ಮೂಲಕ ಸುಲಿಗೆ ಮಾಡುತ್ತಿದ್ದ ಕಾನ್ಸ್ಟೇಬಲ್ನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ ಆನಂದ್ ಬಂಧಿತ ಆರೋಪಿ.
ಕ್ರಿಕೆಟ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಆನಂದ್ ವಿಪರೀತ ಸಾಲ ಮಾಡಿಕೊಂಡಿದ್ದ. ಸಂಬಳದ ಹಣದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದಿದ್ದಾಗ ಅಡ್ಡದಾರಿ ಹಿಡಿದಿದ್ದ. ಅದರಂತೆ ಡಿಸೆಂಬರ್ 17ರಂದು ಸುಣಕಲ್ ಪೇಟೆಯ ಚಿಕ್ಕ ಅಣ್ಣಮ್ಮ ಸ್ಟ್ರೀಟ್ ಬಳಿ 10 ಲಕ್ಷದೊಂದಿಗೆ ತೆರಳುತ್ತಿದ್ದ ಉದ್ಯಮಿ ರಾಜುರಾಮ್ ಎಂಬುವವರನ್ನ ಅಡ್ಡಗಟ್ಟಿದ್ದ ಆನಂದ್, ತನ್ನ ಐಡಿ ಕಾರ್ಡ್ ತೋರಿಸಿ 'ನೀನು ಹವಾಲ ಹಣ ಸಾಗಿಸುತ್ತಿದ್ದೀಯಾ' ಎಂದು ಬೆದರಿಸಿದ್ದರಂತೆ.
ಅಲ್ಲದೇ ರೇಡ್ ಮಾಡಿಸಿ ಅರೆಸ್ಟ್ ಮಾಡಿಸುವುದಾಗಿ ಬೆದರಿಸಿ ತನ್ನ ಸ್ನೇಹಿತನ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಬಿಟ್ಟು ಬಿಡೋದಾಗಿ ಹೇಳಿದ್ದರಂತೆ. ಅದರಂತೆ 2 ಲಕ್ಷ ಹಣವನ್ನ ಆನಂದ್ ಹೇಳಿದ ಖಾತೆಗೆ ರಾಜುರಾಮ್ ಜಮೆ ಮಾಡಿದ್ದರು. ನಂತರ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣಾ ಪೊಲೀಸರು ಆರೋಪಿ ಆನಂದ್ ಅವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಈ ಘಟನೆ ಗಮನಕ್ಕೆ ಬಂದ ತಕ್ಷಣ ಆರೋಪಿಯನ್ನ ಬಂಧಿಸಲಾಗಿದೆ. ಇಂಥಹ ಘಟನೆಗಳನ್ನ ನಾವು ಸಹಿಸುವುದಿಲ್ಲ ಎಂದು ಹೇಳಿದರು. ಇಂಥಹ ಘಟನೆಗಳನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲಾಖೆಯಲ್ಲಿ ನೂರರಲ್ಲಿ 95 ಪ್ರತಿಶತ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಐದು ಪ್ರತಿಶತ ಅಪರಾಧ ಪ್ರವೃತ್ತಿ ಇರುವವರ ಬಗ್ಗೆ ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ವರ್ತೂರು ಪ್ರಕಾಶ್ ಹುಟ್ಟುಹಬ್ಬ: ಬಿರಿಯಾನಿಗೆ ಮುಗಿಬಿದ್ದ ಜನರಿಗೆ ಲಾಠಿ ಏಟು