ಬೆಂಗಳೂರು: ರಾಜ್ಯದಲ್ಲಿ ಮದ್ಯ ಖರೀದಿ ವಯೋಮಾನ 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆ ಆಗಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಖರೀದಿ ವಯೋಮಾನದ ಕುರಿತು 9.01.2023 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
ಮದ್ಯ ಖರೀದಿಸುವವರ ವಯೋಮಿತಿ 21 ರಿಂದ 18ಕ್ಕೆ ಇಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇದಕ್ಕೆ ಅನೇಕ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಈ ಸಂಬಂಧ ಸಮಿತಿ ರಚನೆ ಮಾಡಿ, ಸದ್ಯ ಈಗ ಯಾವ ರೀತಿ ಇದೆಯೋ ಅದರಂತೆಯೇ ಮುಂದುವರೆಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ ಮದ್ಯ ಮಾರಾಟದ ವಿರುದ್ಧ ದಿಟ್ಟ ಕ್ರಮ: ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅನೇಕ ಕಡೆ ದಿಟ್ಟ ಕ್ರಮ ವಹಿಸಲಾಗಿದೆ. ಮುಂದೆಯೂ ಅದೇ ರೀತಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವರು ಮಾಹಿತಿ ನೀಡಿದರು. ಈ ವರ್ಷ ಅಬಕಾರಿ ಇಲಾಖೆಗೆ ನಿಗದಿ ಪಡಿಸಿರುವ ಆರ್ಥಿಕ ಗುರಿಯನ್ನು ಇಲಾಖೆ ದಾಟಲಿದೆ. ಕಳೆದ ಐದು ವರ್ಷಗಳೂ ಸತತವಾಗಿ ನಮಗೆ ನಿಗದಿ ಪಡಿಸಿದ್ದ ಗುರಿಯನ್ನು ದಾಟಿದ್ದೇವೆ. ಈ ಬಾರಿಯೂ ಹಿಂದೆ ಬೀಳಲ್ಲ, ನಮಗೆ ನಿಗದಿ ಪಡಿಸಿರುವ ಗುರಿ ತಲುಪಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದರು.
ಐದು ವರ್ಷದ ಗುರಿ: 2017-18 ರಲ್ಲಿ ನೀಡಲಾಗಿದ್ದ ಗುರಿ 17,600 ಕೋಟಿ ಆಗಿದ್ದು, 17,948.51 ಕೋಟಿ ಸಂಗ್ರಹಿಸಿದೆ. ಶೇ. 101.98 ಸಾಧನೆ ಮಾಡಿದೆ. 2018-19 ರಲ್ಲಿ ನೀಡಲಾಗಿದ್ದ ಗುರಿ 19,750 ಕೋಟಿ ಆಗಿದ್ದು, 19,943.93 ಕೋಟಿ ಸಂಗ್ರಹಿಸಿದೆ. ಶೇ. 100.98 ಸಾಧನೆ ಮಾಡಿದೆ. 2019-20 ರಲ್ಲಿ ನೀಡಲಾಗಿದ್ದ ಗುರಿ 20,950 ಕೋಟಿ ಆಗಿದ್ದು, 21,583.95 ಕೋಟಿ ಸಂಗ್ರಹಿಸಿದೆ. ಶೇ. 103.03 ಸಾಧನೆ ಮಾಡಿದೆ. 2020-21 ರಲ್ಲಿ ನೀಡಲಾಗಿದ್ದ ಗುರಿ 22,700 ಕೋಟಿ ಆಗಿದ್ದು, 23,332.10 ಕೋಟಿ ಸಂಗ್ರಹಿಸಿದೆ. ಶೇ. 102.78 ಸಾಧನೆ ಮಾಡಿದೆ. 2021-22 ರಲ್ಲಿ ನೀಡಲಾಗಿದ್ದ ಗುರಿ 24,580 ಕೋಟಿ ಆಗಿದ್ದು, 26,377.68 ಕೋಟಿ ಸಂಗ್ರಹಿಸಿದೆ. ಶೇ. 107.31 ಸಾಧನೆ ಮಾಡಿದೆ.
2022-23 ರಲ್ಲಿ ನೀಡಲಾಗಿದ್ದ ಗುರಿ 29,000 ಕೋಟಿ ಆಗಿದ್ದು, ಜನವರಿ ಅಂತ್ಯಕ್ಕೆ 24,724.27 ಕೋಟಿ ಸಂಗ್ರಹಿಸಿದೆ. ಶೇ. 85.26 ಸಾಧನೆ ಮಾಡಿದೆ. ಆದರೆ, ಪರಿಷ್ಕೃತವಾಗಿ 3 ಸಾವಿರ ಕೋಟಿ ಹೆಚ್ಚುವರಿ ಗುರಿ ಹೊಸದಾಗಿ ನೀಡಿದ್ದು, ಅದರಂತೆ 32,000 ಕೋಟಿ ಗುರಿ ತಲುಪಬೇಕಿದೆ. ಅದಕ್ಕೆ ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದು ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಕೇಸ್: ವಿಚಾರಣೆ ಮುಂದೂಡುವಂತೆ ಸಿಬಿಐಗೆ ಸಿಸೋಡಿಯಾ ಮನವಿ