ಬೆಂಗಳೂರು: ಸತೀಶ ಜಾರಕಿಹೊಳಿ ಜೊತೆಗೆ ರಮೇಶ ಜಾರಕಿಹೊಳಿ ಅವ್ರಿಗೂ ಸಚಿವ ಸ್ಥಾನ ಕೊಡಲಿ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.
ರಮೇಶ ಜಾರಕಿಹೊಳಿ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಇಬ್ಬರೂ ಸಂಘಟನಾ ಚತುರರು. ಈಗ ಸತೀಶ ಜಾರಕಿಹೊಳಿ ಸಚಿವರಾಗಿದ್ದಾರೆ. ರಮೇಶ ಜಾರಕಿಹೊಳಿ ಅವ್ರಿಗೂ ಮಂತ್ರಿ ಸ್ಥಾನ ನೀಡಲಿ. ನಾನು ಸಿಎಂ ಭೇಟಿ ಮಾಡಿ ನೀರಿನ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇನೆ ಇನ್ನಿತರ ಯಾವುದೇ ವಿಷಯ ಚರ್ಚೆ ಆಗಿಲ್ಲ. ಸಿಎಂ ಜತೆ ಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಮಾಡುವಷ್ಟು ನಾನು ದೊಡ್ಡವನೂ ಅಲ್ಲ. ಆಪರೇಷನ್ ಕಮಲ ದ ಬಗ್ಗೆ ಮಾತಾಡುವುದಾದರೆ ಹೀಗೇಕೆ ಬರಲಿ? ರಹಸ್ಯವಾಗಿ ಬರಬಹುದಿತ್ತು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು ಕುಮಟಳ್ಳಿ.
ಸಾಹುಕಾರರು ಊಟಕ್ಕೆ ಕರೆದಿದ್ರು, ವಿಧಾನಸೌಧದಲ್ಲಿ ನಾನು ಮಾತಾಡಿದ್ದನ್ನು ಸಾಹುಕಾರರು ಕೇಳಿಸಿಕೊಂಡು ಕರೆ ಮಾಡಿ ಚೆನ್ನಾಗಿ ಮಾತಾಡಿದೆ ಅಂದರು. ಸಾಧ್ಯ ಆದ್ರೆ ಊಟಕ್ಕೆ ಬಾ ಅಂದ್ರು. ಬಂದು ಮಾತಾಡಿದೆ. ನಮ್ಮ ಕ್ಷೇತ್ರದಲ್ಲಿ ಒಂದೆಡೆ ಬರ ಇನ್ನೊಂದೆಡೆ ಜೌಗು ಸಮಸ್ಯೆ ಇದೆ. ಒಂದಿಷ್ಟು ಜಮೀನು ಕಳೆದುಕೊಂಡು ಅಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಎರಡರಷ್ಟು ಜಾಗ ಜೌಗು ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕಲೇಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ವ್ಯಾಪ್ತಿಯ ಎಲ್ಲ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸುತ್ತಿದ್ದೇನೆ ಅಷ್ಟೇ ಎನ್ನುವ ಮೂಲಕ ಪ್ರಮುಖ ವಿಷಯದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.