ಬೆಂಗಳೂರು: "ಯಾರ್ಯಾರು ಏನೆಲ್ಲಾ ಹೇಳಬೇಕೋ ಹೇಳಲಿ. ಅವರದ್ದು ಏನಿದೆಯೋ ಅದೆಲ್ಲವೂ ಮೊದಲು ಹೊರಗಡೆ ಬರಲಿ. ಅವರ ಮಾತುಗಳೆಲ್ಲ ಮುಗಿಯಲಿ. ಆ ನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ" ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಇಂದು ಮಾತನಾಡಿದ ಅವರು, "ನಮ್ಮ ಬಳಿ ಇರುವ ಮಾಹಿತಿ ಬಹಿರಂಗಪಡಿಸಲು ಸಾಕಷ್ಟು ಸಮಯವಿದೆ. ನಮ್ಮ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿರುವವರಿಗೆ ಉತ್ತರ ನೀಡುವ ಕಾಲ ಸಮೀಪಿಸಿದೆ. ಉತ್ತರ ನೀಡೋಣ" ಎಂದರು.
ಆಪರೇಷನ್ ಹಸ್ತದ ಕುರಿತು ಕೇಳಿದ ಪ್ರಶ್ನೆಗೆ, "ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸಬೇಡಿ, ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ" ಎಂದು ಹೇಳಿದರು.
"ಸ್ಥಳೀಯವಾಗಿ ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಮಾಡಿಕೊಳ್ಳಬೇಕಾಗುತ್ತದೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ದೊಡ್ಡ, ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ, ಅನ್ಯಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ" ಎಂದು ತಿಳಿಸಿದರು.
"ನಾನು ಮಾತನಾಡ್ತೇನೆ, ಎಲ್ಲದಕ್ಕೂ ಶುಭ ಸಮಯ, ಶುಭ ಲಗ್ನ, ಮುಹೂರ್ತ ಬರಬೇಕು" ಎಂದು ಡಿಸಿಎಂ ಡಿ. ಕೆ ಶಿವಕುಮಾರ್ (ಆಗಸ್ಟ್ -16- 2023) ಸೂಚ್ಯವಾಗಿ ತಿಳಿಸಿದ್ದರು. ಬಿಬಿಎಂಪಿಯಲ್ಲಿ ಏನ್ ನಡೀತಾ ಇದೆ ಅನ್ನೋದನ್ನು ಇನ್ನೆರಡು ದಿನಗಳಲ್ಲಿ ಬಿಚ್ಚಿಡುತ್ತೇನೆ ಎಂದು ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ. ಹೇಮಂತ್ಗೆ ನೀವು ಬೆದರಿಕೆ ಹಾಕಿ ಕ್ಷಮೆ ಕೇಳುವಂತೆ ಮಾಡಿದ್ದೀರಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಅವರು, "ಎಲ್ಲ ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವಿದೆಯೇ?. ಏನು ಬೇಕಾದ್ರೂ ಮಾಡಲಿ. ಅವರ ಹತ್ರ ಏನು ಮಾಹಿತಿಯಿದೆಯೋ ಇಡಲಿ. ಎಲ್ಲರಿಗೂ ಅವಕಾಶವಿದೆ" ಎಂದು ಹೇಳಿದ್ದರು.
ಈ ಮಾತಿನ ಜಟಾಪಟಿ ವೈಯಕ್ತಿಕವೋ, ರಾಜಕೀಯವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅವರ ಜೊತೆ ನಾನ್ಯಾಕೆ ಜಟಾಪಟಿ ಮಾಡಲಿ?. ರಾಜಕೀಯ ಯುದ್ದ ಮಾಡಾಯ್ತು, ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ನಿನ್ನೆ ನಾನೇ ಹೇಳಿದ್ನಲ್ಲ, ನನಗೆ ಸಿಗಲಿಲ್ಲ ಅಂತ, ಈ ತರಹ ಕೈಹಿಸುಕ್ತಿದ್ರೆ ಏನ್ ಮಾಡೋಕಾಗುತ್ತೆ" ಎಂದು ವಾಗ್ದಾಳಿ ನಡೆಸಿದ್ದರು.
ಶಾಸಕರ ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿ, "ನನ್ನ ಹತ್ತಿರ ಯಾರೂ ಏನೂ ಮಾತನಾಡಿಲ್ಲ. ಅವರವರ ರಾಜಕೀಯ ಜೀವನದ ಬಗ್ಗೆ ಅವರವರೇ ತೀರ್ಮಾನಿಸುತ್ತಾರೆ. ಅವರವರ ಬದುಕಿನ ಬಗ್ಗೆ ಅವರವರ ಭವಿಷ್ಯದ ಬಗ್ಗೆ ಅವರವರದ್ದೇ ತೀರ್ಮಾನ. ನನ್ನ ಹತ್ತಿರ ಯಾರೂ ಚರ್ಚಿಸಿಲ್ಲ. ಹಿಂದೆ ಟಾರ್ಗೆಟ್ ಮಿಸ್ ಆದ ಬಗ್ಗೆ ಮುಂದೆ ಮಾತನಾಡುತ್ತೇನೆ. ಬೂತ್ಗಳಲ್ಲಿ ಓಟ್ ಶೇರಿಂಗ್ ಜಾಸ್ತಿ ಆಗಬೇಕಿದೆ. ಸಚಿವನಾಗಿ ನಾನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು" ಎಂದಿದ್ದರು.
ಇದನ್ನೂ ಓದಿ: D K Shivakumar: ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವಿದೆಯೇ?- ಡಿ.ಕೆ.ಶಿವಕುಮಾರ್