ಬೆಂಗಳೂರು: ಬಿಜೆಪಿ ಕುಟುಂಬವೊಂದರ ಪಾರ್ಟಿ ಅಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಅವರದ್ದು ಕುಟುಂಬ ರಾಜಕಾರಣದ ಪಕ್ಷ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ದೇಶದಲ್ಲಿ 130 ಕೋಟಿ ಜನರಿದ್ದು, ನಮ್ಮಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಾಗಬಹುದು. ಆದರೆ, ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣದ ಪಕ್ಷ, ಅವರು ಮನೆಯಲ್ಲೇ ಯಾರು ಸಿಎಂ ಪ್ರಧಾನಿ ತೀರ್ಮಾನ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಗಿ ಕುಟುಕಿದರು.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಕುಮಾರ ಸ್ವಾಮಿ ಅವರದ್ದು, ಬ್ರಿಟಿಷರ ರೀತಿ ಹೊಡೆದು ಆಳುವ ನೀತಿ. ಜಾತಿ ಜಾತಿಗಳ ನಡುವೆ ಭೇದ ಭಾವ ಸೃಷ್ಟಿಸಿ ಎತ್ತಿ ಕಟ್ಟುತ್ತಿದ್ದಾರೆ. ಆದರೆ, ಅವರು ಟಾರ್ಗೆಟ್ 130 ಅಂತಿದ್ದಾರೆ. ಅದ್ಯಾವ ಪರಮಾತ್ಮನ ಸಮೀಕ್ಷೆನೋ ಗೊತ್ತಿಲ್ಲ ಎಂದು ಹಾಸ್ಯಾಸ್ಪದವಾಗಿ ಟೀಕಿಸಿದರು.
ವೋಟ್ ಬ್ಯಾಂಕ್ ರಾಜಕಾರಣ ಆರೋಪ: ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಸಿಎಂ ಆಗಿದ್ದವರೂ ಇದೂವರೆಗೆ ಯಾರೂ ಜಾತಿ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಮಾಜಿ ಸಿಎಂ ಆಗಿದ್ದವರು ಮಾತನಾಡಿದ್ದಾರೆ. ಕರ್ನಾಟಕ ಬ್ರಾಹ್ಮಣರು ಒಳ್ಳೆಯವರು, ಮಹಾರಾಷ್ಟ್ರ, ತಮಿಳುನಾಡು ಮತ್ತಿತರ ಬೇರೆ ಕಡೆ ಇರುವ ಬ್ರಾಹ್ಮಣರು ಕೆಟ್ಟವರು ಅನ್ನುವ ರೀತಿ ಹೋಲಿಕೆ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ಗೋಸ್ಕರ ಹೇಳಿಕೆ ಕೊಡುತ್ತಿದ್ದಾರೆ ಎಂದು ಆರ್ ಅಶೋಕ್ ಗರಂ ಆದರು.
ಬಿಜೆಪಿಯಲ್ಲಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಬೇಕಾದರೆ ಟ್ಯಾಲೆಂಟ್ ಇರಬೇಕು. ಆದರೆ, ಜೆಡಿಎಸ್ ನಲ್ಲಿ ಟ್ಯಾಲೆಂಟ್ ಇಲ್ಲ. ಕೇವಲ ಕುಟುಂಬ ರಾಜಕಾರಣ ಅಷ್ಟೆ. ಅವರ ಕುಟುಂಬದ ಸಭೆಯಲ್ಲಿ ರಾಜ್ಯದ ರಾಜಕೀಯ ಚಿತ್ರಣ ನಿರ್ಧರಿಸಲಾಗುತ್ತದೆ. ಆದರೆ, ಬಿಜೆಪಿಯಲ್ಲಿ ಪ್ರಜಾಪ್ರಭುತ್ವದಡಿ ರಾಜ್ಯದ ಸಿಎಂ ಯಾರು ಆಗಬೇಕು, ಯಾರು ಮಂತ್ರಿಗಳಾಗಬೇಕು ಎಂಬುವುದನ್ನು ನಿರ್ಧರಿಸಲಾಗುತ್ತದೆ ಎಂದು ಆಪಾದಿಸಿದರು.
ಜೋಶಿ ಸಿಎಂ ಕೇಂದ್ರ ವರಿಷ್ಠರ ನಿರ್ಧಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಆಗಬೇಕೋ, ಬೇಡವೋ ಎಂಬುದು ಚುನಾವಣೆ ಆದ ಬಳಿಕ ಗೊತ್ತಾಗಬೇಕು. ಅದು ಕೇಂದ್ರದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಶಾಸಕರೆಲ್ಲ ಆದ ನಂತರ ದೇವೇಗೌಡರು ತೀರ್ಮಾನ ಮಾಡಿದ ರೀತಿ ನಮ್ಮಲ್ಲಿ ಆಗಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ:ಈಗಲೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳು. ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತೇವೆ ಎಂದು ಸಿಎಂ ಯಾರು ಎಂದು ತೀರ್ಮಾನ ಮಾಡುವುದು ಕೋರ್ ಕಮಿಟಿ ಎಂದರು. ಯಾವುದೋ ಕುಟುಂಬ ಮಧ್ಯೆ ತೀರ್ಮಾನ ಆಗಲ್ಲ. ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತಳ, ಬುಡ ಏನೂ ಇಲ್ಲ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಜೆಡಿಎಸ್ ನಲ್ಲಿ ತಲ್ಲಣ ಉಂಟಾಗಿರಬಹುದು. ಎಂಟು ಜನ ಡಿಸಿಎಂ ಯಾರು ಅಂತಾ ಗೊತ್ತಿದ್ದರೆ ಬಹಿರಂಗಪಡಿಸಿ, ಈ ಥರ ಹುಚ್ಚುಚ್ಚು ಸ್ಟೇಟ್ ಮೆಂಟ್ ಯಾರಾದರೂ ಕೊಡುತ್ತಾರಾ. ಜೆಡಿಎಸ್ ಹಿಂದೆ ಯಾರೂ ಹೋಗಲ್ಲ. ಕುಮಾರಸ್ವಾಮಿ ಅವರು ಸಿಎಂ ವರ್ಚಸ್ಸಿನಿಂದ ಕೆಳಮಟ್ಟಕ್ಕೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ:ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಮೋದಿ ಸರ್ಕಾರದ ವಿರುದ್ಧ ಹೆಚ್ಡಿಕೆ ಟೀಕೆ