ಬೆಂಗಳೂರು: ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಯೊಬ್ಬರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ವಿವಿಯಲ್ಲಿ 3ನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿ ಪುರ್ಬಯಾನ್ ಚಕ್ರಬರ್ತಿ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿರ್ದೇಶನದಂತೆ ಮಧ್ಯಂತರ ಸೆಮಿಸ್ಟರ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ವರ್ಷ ಪಡೆದಿರುವ ಅಂಕಗಳ ಆಧಾರದ ಮೇಲೆ ಮುಂದಿನ ಸೆಮಿಸ್ಟರ್ಗೆ ಬಡ್ತಿ ನೀಡಿ ಪಾಸ್ ಮಾಡಬೇಕು ಎಂದು ಕೋರಿದ್ದಾರೆ.
ವಿವಿಯ ಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಕೊರೊನಾ ಸೋಂಕು ವ್ಯಾಪಿಸಿದಂತೆ ಲಾಕ್ಡೌನ್ ಜಾರಿ ಮಾಡಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಜತೆಗೆ ಇಂಟರ್ ನೆಟ್, ಮೊಬೈಲ್, ಲ್ಯಾಪ್ ಟಾಪ್ಗಳ ಕೊರತೆಯಿಂದಾಗಿಯೂ ಕೆಲವರಿಗೆ ಪಾಠ ಕೇಳಲು ಸಾಧ್ಯವಾಗಿಲ್ಲ.
ಈಗಾಗಲೇ ಶೈಕ್ಷಣಿಕ ವರ್ಷ ವಿಳಂಬವಾಗಿದೆ. ಕಾಲೇಜುಗಳು ಆರಂಭವಾಗಲು ಇನ್ನೂ 2-3 ತಿಂಗಳು ಬೇಕಾಗಲಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳಲು ಹೋದರೆ ಪ್ರಸಕ್ತ ಶೈಕ್ಷಣಿಕ ವರ್ಷ ಹಾಳಾಗುತ್ತದೆ. ಹೀಗಾಗಿ ಯುಜಿಜಿ ನಿರ್ದೇಶನದಂತೆ ಮಧ್ಯಂತರ ಸೆಮಿಸ್ಟರ್ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಅರ್ಜಿದಾರ ವಿದ್ಯಾರ್ಥಿ ಮನವಿ ಮಾಡಿದ್ದಾರೆ.